
#ಬೆಂಗಳೂರು :- ಕೇರಳದ ಗಡಿಯಲ್ಲಿರುವ ಕರ್ನಾಟಕದ #ಜಿಲ್ಲೆಗಳಲ್ಲಿ #ಕೇರಳದಿಂದ ವೈದ್ಯಕೀಯ ಹಾಗೂ ಜೈವಿಕ ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇರಳ ಸರ್ಕಾರ ಮುಂದಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, “ಕೇರಳದ ಗಡಿಯಲ್ಲಿರುವ ರಾಜ್ಯದ ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ವೈದ್ಯಕೀಯ ಹಾಗೂ ಜೈವಿಕ ತ್ಯಾಜ್ಯಗಳನ್ನು ಎಸೆಯುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವ ಮೂಲಕ, ಈ ಸಮಸ್ಯೆಗೆ ಕ್ಷಿಪ್ರವಾಗಿ ಸ್ಪಂದಿಸಿದ ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿಗೆ ಕೃತಜ್ಞತೆ ಸಲ್ಲಿಸಬಯಸುತ್ತೇನೆ.
ಕೆಲವು ಮಾಧ್ಯಮಗಳಲ್ಲಿ ಕೇರಳದಿಂದ ಗಡಿಯಲ್ಲಿರುವ ರಾಜ್ಯದ ಜಿಲ್ಲೆಗಳಲ್ಲಿ ತ್ಯಾಜ್ಯ ಎಸೆಯಲಾಗುತ್ತಿದೆ ಎನ್ನುವ ಕುರಿತಾಗಿ ಬಂದಿರುವ ವರದಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಪರಿಸರ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು ವಸ್ತುಸ್ಥಿತಿಯನ್ನು ಅರಿತು, ನೆರೆಯ ರಾಜ್ಯದಿಂದ ನಮ್ಮ ರಾಜ್ಯದಲ್ಲಿ ತ್ಯಾಜ್ಯ ಸುರಿಯುವ ವ್ಯಕ್ತಿಗಳು ಅಥವಾ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇನೆ. ಈ ಜೈವಿಕ-ವೈದ್ಯಕೀಯ ತ್ಯಾಜ್ಯಗಳನ್ನು ಬೆಲ್ಲ ತಯಾರಿಕೆಯಲ್ಲಿ ಇಂಧನವಾಗಿ ಬಳಕೆ ಮಾಡುವುದನ್ನು ತಡೆಗಟ್ಟುವಂತೆಯೂ ಅಧಿಕಾರಿಗಳಿಗೆ ಸೂಚಿಸಿದ್ದೇನೆ.” ಎಂದು ತಿಳಿಸಿದ್ದಾರೆ.
ಶೀಘ್ರವೇ ಈ ಅಕ್ರಮವನ್ನು ತಡೆಯಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment