ಹಳಿಯಾಳ :- ಪಶ್ಚಿಮ ಪದವೀಧರರ ಮತ ಕ್ಷೇತ್ರದಲ್ಲಿ ಕಳೆದ 6 ವರ್ಷಗಳ ಅವಧಿಯಲ್ಲಿ ನನ್ನ ಸೇವೆ ಮತ್ತು ಸಾಧನೆಯನ್ನು ನೋಡಿ ನನಗೆ ಮತ ನೀಡಿ ಎಂದು ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಎಸ್ ವಿ ಸಂಕನೂರು ಮತದಾರರಲ್ಲಿ ವಿನಂತಿಸಿದರು.

ಪಶ್ಚಿಮ ಪದವೀಧರ ಮತ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆ ಗುರುವಾರ ಹಳಿಯಾಳ ಕ್ಷೇತ್ರಕ್ಕೆ ಮತಯಾಚನೆಗೆ ಆಗಮಿಸಿದ ಅವರು ಇಲ್ಲಿಯ ಪ್ರಸಿದ್ದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ಬಳಿಕ ಹಳಿಯಾಳ ನ್ಯಾಯಾಲಯ, ಹವಗಿ ಡಿಗ್ರಿ ಕಾಲೇಜ್, ತಹಶೀಲ್ದಾರ್ ಕಾರ್ಯಾಲಯ ಹಾಗೂ ಹಲವು ಕಡೆಗಳಲ್ಲಿ ಪದವಿಧರ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಿ ಬಳಿಕ ವಿ.ಡಿ ಹೆಗಡೆ ಪದವಿ ಪೂರ್ವ ಮಹಾವಿದ್ಯಾಲಯಲ್ಲಿ ನಡೆದ ಮತದಾರರ ಸಭೆಯಲ್ಲಿ ಮಾತನಾಡಿದರು.

ಕಳೆದ 6 ವರ್ಷಗಳ ಅವಧಿಯಲ್ಲಿ ನನ್ನ ಮತಕ್ಷೇತ್ರಕ್ಕೆ ನಾನು ಸಲ್ಲಿಸಿರುವ ಸೇವೆಯನ್ನು
‘ಸದನದಲ್ಲಿ ಸಂಕನೂರ್’ ಮತ್ತು ‘ಸ್ಪಂದನೆ ಮತ್ತು ಸಾಧನೆ’ ಎಂಬ ಎರಡು ಪುಸ್ತಕಗಳಲ್ಲಿ ಸವಿಸ್ತಾರವಾಗಿ ದಾಖಲಿಸಿದ್ದು ಮತದಾರರಿಗೆ ಆ ಪುಸ್ತಕಗಳನ್ನು ನೀಡಿ ಮತಯಾಚನೆ ಮಾಡುತ್ತಿದ್ದೇನೆ. ನಾನು ನೀಡಿರುವ ಸೇವೆ, ಸಾಧನೆ ಮತ್ತು ಸ್ಪಂದನೆಗಳನ್ನು ಗಣನೆಗೆ ತೆಗೆದುಕೊಂಡು ಮತ್ತೊಮ್ಮೆ ನನ್ನನ್ನು ಪುನರಾಯ್ಕೆ ಮಾಡಬೇಕು ಎಂದು ಅಭ್ಯಥಿ ಸಂಕನೂರು ವಿನಂತಿಸಿದರು.

ಕಳೆದೊಂದು ಅವಧಿಯಲ್ಲಿ ನಾನು ಸಂಕಲ್ಪ ಮಾಡಿದ್ದ ಎಲ್ಲಾ ಕೆಲಸಗಳನ್ನು ನನ್ನಿಂದ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಕಾರಣ ಆ ಅವಧಿಯ ಬಹುತೇಕ ಭಾಗದಲ್ಲಿ ರಾಜ್ಯದಲ್ಲಿ ಬಿಜೆಪಿಯೇತರ ಸರಕಾರಗಳು ಅಸ್ತಿತ್ವದಲ್ಲಿದ್ದವು. ಈಗ ರಾಜ್ಯದಲ್ಲಿ ನಮ್ಮದೇ ಬಿಜೆಪಿ ಸರಕಾರ ಅಸ್ತಿತ್ವದಲ್ಲಿದೆ. ಮೇಲಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೌಕರರ ಪರವಾಗಿ ಕೆಲಸ ಮಾಡುತ್ತಿರುವುದರಿಂದ ಈ ಅವಧಿಯಲ್ಲಿ ನನಗೆ ಮತ್ತೊಮ್ಮೆ ಅಧಿಕಾರ ವಹಿಸಿಕೊಟ್ಟರೆ, ಬಾಕಿ ಉಳಿದಿರುವ ನನ್ನ ಸಂಕಲ್ಪದ ಎಲ್ಲಾ ಕೆಲಸಗಳನ್ನು ಮಾಡುತ್ತೇನೆ ಎಂದು ಹೇಳಿದರು.

ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ ಜನ ಪ್ರತಿನಿಧಿಯಾದವರು ಸಾಮಾನ್ಯವಾಗಿ ಅಭ್ಯರ್ಥಿಯಾದಾಗ ಮಾಡಿದ ಸಂಕಲ್ಪಗಳನ್ನೆಲ್ಲ ಸಾಕಾರ ಮಾಡುವುದಕ್ಕೆ ಆಗುವುದಿಲ್ಲ ಆದರೂ ಈ ವಿಷಯದಲ್ಲಿ ವಿಪ ಸದಸ್ಯ ಸಂಕನೂರು ಅವರ ಸಾಧನೆ ಮತ್ತು ಸ್ಪಂದನೆ ಬೇರೆಯವರಿಗಿಂತ ವಿಸ್ತಾರವಾಗಿವೆ ಎಂದು ಶ್ಲಾಘನೆ ವ್ಯಕ್ತಪಡಿಸಿದ ಹೆಗಡೆ ಮತದಾರರು ಬಹುಮತಗಳ ಅಂತರದೊಂದಿಗೆ ಅವರನ್ನೇ ಮತ್ತೊಮ್ಮೆ ವಿಧಾನ ಪರಿಷತ್‍ಗೆ ಕಳಿಸುವಂತೆ ಕೊರಿದರು.

ಈ ಸಂದರ್ಭದಲ್ಲಿ ಹಳಿಯಾಳ ಬಿಜೆಪಿ ಅಧ್ಯಕ್ಷ ಅಜೋಬಾ ಕರಂಜೆಕರ, ಪ್ರಮುಖರಾದ ಮಂಗೇಶ ದೇಶಪಾಂಡೆ, ಶಿವಾಜಿ ನರಸಾನಿ, ಅನಿಲ ಮುತ್ನಾಳ, ಪುರಸಭೆ ಸದಸ್ಯರಾದ ರೂಪಾ ಗಿರಿ, ಶಾಂತಾ ಹಿರೇಕರ, ಚಂದ್ರಕಾಂತ ಕಮ್ಮಾರ, ರಾಜೇಶ್ವರಿ ಹಿರೇಮಠ, ಉದಯ ಹೂಲಿ, ಸಂಗೀತಾ ಜಾಧವ, ಸಂತೋಷ ಘಟಕಾಂಬಳೆ, ಮುಖಂಡರಾದ ಜಯಲಕ್ಷ್ಮೀ ಚವ್ವಾಣ, ರತ್ನಮಾಲಾ ಮುಳೆ, ಯಲ್ಲಪ್ಪಾ ಹೊನ್ನೊಜಿ, ಉಮೇಶ ದೇಶಪಾಂಡೆ ಇತರರು ಇದ್ದರು.

Leave a Comment