ಯಲ್ಲಾಪುರ : ಕೊರೊನಾ ಲಾಕ್‍ಡೌನ್ ನಂತರದಲ್ಲಿ ಮಕ್ಕಳ ಮೇಲಿನ ವಿವಿಧ ರೀತಿಯ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು ಈ ಕುರಿತು ರಾಷ್ಟ್ರೀಯ , ರಾಜ್ಯ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹೆಚ್ಚು ಚರ್ಚೆಗಳು ನಡೆಯುತ್ತಿದೆ. ಲಾಕ್‍ಡೌನ್ ಸಮಯದಲ್ಲಿ ಮಕ್ಕಳು ಮನೆಯಲ್ಲಿಯೇ ಉಳಿಯುವುದರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವುದು, ಬಾಲ್ಯ ವಿವಾಹಗಳಿಗೆ ಸಿಲುಕುವುದು, ಬಾಲ ಕಾರ್ಮಿಕರಾಗುವಂತಹ ಸಮಸ್ಯೆಗಳಿಂದ ಮಕ್ಕಳನ್ನು ರಕ್ಷಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಅಂತೋಣಿ ಸಬಾಸ್ಟಿನ್ ಹೇಳಿದರು.

ಅವರು ಪಟ್ಟಣದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗಳಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಪೋಕ್ಸೋ ಕಾಯಿದೆಯು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಿದ್ದು ಹೊಸ ನಿಯಮದಂತೆ ಪೋಕ್ಸೋ ಪ್ರಕರಣಕ್ಕೆ ಸಿಲುಕಿದ ಸಂತ್ರಸ್ಥೆಗೆ ಏಳು ದಿನಗಳೊಳಗಾಗಿ 15,000 ರೂ ಪರಿಹಾರವನ್ನು ನೀಡಬೇಕಿದೆ. ಮತ್ತು ಶಿಕ್ಷೆಯ ಪ್ರಮಾಣವೂ ಹೆಚ್ಚಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಹೆಚ್ಚಿನ ಜಾಗೃತಿ ಅವಶ್ಯವಿದ್ದು ಒಂದು ಜಿಲ್ಲೆಯ ಅಂಗನವಾಡಿ ಮಕ್ಕಳು ಮತ್ತೊಂದು ಜಿಲ್ಲೆಗೆ ವಲಸೆ ಹೋದರೆ ಆ ಜಿಲ್ಲೆಯಲ್ಲಿ ಮಕ್ಕಳ ಪರಿಸ್ಥಿತಿ ಏನು ಎಂಬುದನ್ನು ತಿಳಿದುಕೊಳ್ಳಬೇಕಿದೆ. ಈ ಭಾಗದಿಂದ ಹೆಚ್ಚಿನ ಮಕ್ಕಳು ಗೋವಾ ರಾಜ್ಯಕ್ಕೆ ಬಾಲಕಾರ್ಮಿಕರಾಗಿ ವಲಸೆ ಹೋಗುತ್ತಿದ್ದಾರೆ ಎಂದು ಆಯೋಗಕ್ಕೆ ಮಾಹಿತಿ ಬಂದಿದ್ದು ಇದನ್ನು ತಡೆಗಟ್ಟುವಲ್ಲಿ ಮುಂದಾಗಬೇಕಿದೆ ಎಂದರು.
ಯಲ್ಲಾಪುರದ ಸಿಡಿಪಿಒ ರಫೀಕಾ ಎ ಹಳ್ಳೂರು ಮಾಹಿತಿ ನೀಡಿ ತಾಲೂಕಿನಲ್ಲಿ 82,264 ಜನಸಂಖ್ಯೆ ಇದ್ದು 6ವರ್ಷದ ಒಳಗಿನ ಮಕ್ಕಳ ಸಂಖ್ಯೆ 6055 ಆಗಿದೆ. ಲಾಕ್‍ಡೌನ್ ಸಮಯದಿಂದಲೂ ಪೌಷ್ಠಿಕ ಆಹಾರವನ್ನು ಮನೆಬಾಗಿಲಿಗೆ ತಲುಪಿಸುತ್ತಿದ್ದು ಬಾಲ್ಯವಿವಾಹದ ಪ್ರಕರಣಗಳು ದಾಖಲಾಗಿಲ್ಲ. 7 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು ಅದರಲ್ಲಿ 4 ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು 3 ಪ್ರಕರಣಗಳಿಗೆ ಎಫ್.ಐ.ಆರ್ ದಾಖಲಾಗಿದೆ ಎಂದರು.
ಸಭೆಯಲ್ಲಿ ಶಿರಸಿ, ಹಳಿಯಾಳ, ಸಿದ್ದಾಪುರ, ಮುಂಡಗೋಡು, ಕಾರವಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ಅಧಿಕಾರಿಗಳು ತಮ್ಮ ತಾಲೂಕಿನ ವ್ಯಾಪ್ತಿಯಲ್ಲಿರುವ ಮಕ್ಕಳ ಸಂಖ್ಯೆ, ಬಾಲ್ಯವಿವಾಹ, ಬಾಲಕಾರ್ಮಿಕ , ಪೋಕ್ಸೋ ಪ್ರಕರಣಗಳ ಸಂಪೂರ್ಣ ಮಾಹಿತಿ ಆಯೋಗಕ್ಕೆ ನೀಡಿದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಅಶೋಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾ ನಿರ್ದೇಶಕಿ ಪದ್ಮಾವತಿ ಜಿ ಉಪಸ್ಥಿತರಿದ್ದರು.
Leave a Comment