ಹಳಿಯಾಳ: ಇಲ್ಲಿನ ಹಿರಿಯ ಪತ್ರಕರ್ತ ಬಿ ಆರ್ ವಿಭೂತೆ(79) ಹೃದಯಾಘಾತದಿಂದ ವಿಧಿವಶರಾಗುವ ಮೂಲಕ ಹಳಿಯಾಳ ಪತ್ರಿಕಾ ಕ್ಷೇತ್ರದಲ್ಲಿನ ಅತ್ಯಂತ ಹಿರಿಯ ಕೊಂಡಿಯೊಂದು ಕಳಚಿ ಬಿದ್ದಂತಾಗಿದೆ.ಹಳಿಯಾಳದ ಪತ್ರಿಕಾ ಕ್ಷೇತ್ರದಲ್ಲಿ ಸುಮಾರು_35 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿದ ಹಿರಿಮೆ ಅವರದು.


ಹಳಿಯಾಳದಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘವನ್ನು ಪ್ರಪ್ರಥಮಬಾರಿಗೆ ಹುಟ್ಟು ಹಾಕಿದ್ದು ಅವರೇ, ಹೀಗಾಗಿ ಹಳಿಯಾಳ_ಕಾರ್ಯನೀರತ ಪತ್ರಕರ್ತರ_ಸಂಘದ_ಸಂಸ್ಥಾಪಕ_ಅಧ್ಯಕ್ಷರಾಗಿದ್ದರೂ ಕೂಡ. ವಿಭುತೆ ಅವರಿಗೆ ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ತೀವ್ರವಾದ ಆಸಕ್ತಿ ಮತ್ತು ಪ್ರೌಡಿಮೆಗಳಿದ್ದವು. ಹೀಗಾಗಿ ಬಹುಭಾಷಾ ಪತ್ರಕರ್ತರಾಗಿ ಕನ್ನಡ, ಇಂಗ್ಲೀಷ್ ಹಾಗೂ ಮರಾಠಿ ಪತ್ರಿಕೆಗಳಿಗೆ ಅವರು ವರದಿಗಾರನಾಗಿ ಸುಧೀರ್ಘ ಸೇವೆ ಸಲ್ಲಿಸಿದ್ದರು. ಅವರ ಪತ್ರಿಕಾ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಮಟ್ಟದ_ಶಾಮರಾವ್ ದತ್ತಿ_ಪ್ರಶಸ್ತಿಯನ್ನೂ ಹಾಗೂ ಕರ್ನಾಟಕ_ರಾಜ್ಯ ಮಾಧ್ಯಮ_ಅಕಾಡೆಮಿ_ಪ್ರಶಸ್ತಿಯನ್ನು_ನೀಡಿ ಅವರನ್ನು ಗೌರವಿಸಲಾಗಿತ್ತು. ಕೇವಲ ಇಲ್ಲಿನ ಮಾಧ್ಯಮ ಕ್ಷೇತ್ರದಲ್ಲಿನ ಸೇವೆ ಮಾತ್ರ ಅಲ್ಲದೇ, ಹವ್ಯಾಸಿ ಗಾಯಕರಾಗಿ ಅವರು ಸಂಗೀತ ಕ್ಷೇತ್ರದಲ್ಲಿ ಕೂಡ ಗಮನಾರ್ಹ ಕೊಡುಗೆ ನೀಡಿದ್ದರು. ಹಳೆಯ_ಚಿತ್ರ_ಸಂಗೀತ_ಪ್ರೇಮಿಗಳ_ಸಂಘ (OFMLA– ಓಲ್ಡ್ ಫಿಲ್ಮ್ ಮ್ಯೂಸಿಕ್ ಲವರ್ ಅಸೋಸಿಯೇಷನ್)ಕೂಡ ಅಸ್ತಿತ್ವಕ್ಕೆ ತಂದು, ಪ್ರತಿವರ್ಷ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಹಳಿಯಾಳ ಜನರ ಮನಗೆದ್ದಿದ್ದರು. ಗಣಿತ ಮತ್ತು ಇಂಗ್ಲಿಷ್ ಶಾಸ್ತ್ರಗಳಲ್ಲೂ ಅವರಿಗೆ ತೀವ್ರ ವಾದ ಆಸಕ್ತಿ ಇತ್ತಾದ್ದರಿಂದ, ಎಲ್ಲಾ ವಯೋಮಾನದ ಆಸಕ್ತರಿಗೆ ಅವರು ಟ್ಯೂಷನ್ ಶಿಕ್ಷಕರಾಗಿ ಬೋಧನೆ ಮಾಡಿದ್ದರು.ಮೂಲತಃ ಹುಬ್ಬಳ್ಳಿಯವರಾಗಿದ್ದ ಅವರು ನೌಕರಿಯ ನಿಮಿತ್ಯ ಹಳಿಯಾಳಕ್ಕೆ ವಲಸೆ ಬಂದಿದ್ದರು. ಒಂದು ಕಾಲದಲ್ಲಿ ಹಾಲಿ ಶಾಸಕ ಆರ್ ವಿ ದೇಶಪಾಂಡೆ ಅವರ ಸಹವರ್ತಿ ಆಗಿದ್ದ ಅವರು ಎಲ್ ಐ ಸಿ ಯ ಡೆವೆಲೆಪ್ಮೆಂಟ್ ಅಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು. ಅದರ ಜೊತೆ ಜೊತೆಗೆ ಸಕ್ರಿಯ ಸಾರ್ವಜನಿಕ ಜೀವನದಲ್ಲಿ ಅವರು ತೊಡಗಿಸಿಕೊಂಡಿದ್ದರಾದರೂ, ನಂತರ ನೌಕರಿ ಬಿಟ್ಟು ಪೂರ್ಣಾವಧಿಯ ಪತ್ರಕರ್ತರಾಗಿ ಅಖಾಡಕ್ಕೆ ಧುಮುಕಿದ್ದರು.ಅವರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸಂತಾಪ:- ಅವರ ನಿಧನಕ್ಕೆ ಹಳಿಯಾಳ ಕಾರ್ಯನಿರತ ಪತ್ರಕರ್ತರ ಸಂಘ, ಹಿರಿಯ ನಾಗರೀಕರ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಪಂಚಾಯತ ಕಾವಲು ಸಂಘ, ಮಂಜು ಡ್ಯಾನ್ಸ್ ಕರಾಟೆ ಸ್ಕೂಲ್, ಕಾಂಗ್ರೇಸ್ ಪಕ್ಷ, ಬಿಜೆಪಿ ಘಟಕ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆಯನ್ನು ಹಳಿಯಾಳದಲ್ಲಿಯೇ ಸಂಜೆ 3 ಗಂಟೆಯ ಸುಮಾರಿಗೆ ನೆರವೇರಿಸಲಾಗುವುದು ಎಂದು ಪರಿವಾರದ ಮೂಲಗಳು ತಿಳಿಸಿವೆ.
Leave a Comment