ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 3ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಶೃಂಗಸಭೆ ಮತ್ತು ಪ್ರದರ್ಶನ (ರಿ-ಇನ್ವೆಸ್ಟ್ 2020)ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಈ ಶೃಂಗಸಭೆಯನ್ನು ಆಯೋಜಿಸಿದೆ. ಈ ರಿ-ಇನ್ವೆಸ್ಟ್ 2020ಯ ಘೋಷವಾಕ್ಯ “ಸುಸ್ಥಿರ ಇಂಧನ ಬದಲಾವಣೆಗೆ ಆವಿಷ್ಕಾರಗಳು’’ಎಂಬುದಾಗಿದೆ.
ನವೀಕರಿಸಬಹುದಾದ ಇಂಧನ ವಲಯದಲ್ಲಿ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಅತ್ಯಲ್ಪ ಅವಧಿಯಲ್ಲಿಯೇ ಮೆಗಾವ್ಯಾಟ್ ನಿಂದ ಗಿಗಾ ವ್ಯಾಟ್ ಗೆ ಪ್ರಗತಿ ಹೊಂದಿರುವುದಕ್ಕೆ ಮತ್ತು ನಾವು ಹಿಂದಿನ ಆವೃತ್ತಿಗಳಲ್ಲಿ ಮಾತನಾಡಿದ್ದಂತೆ “ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’’ ಸಾಕಾರವಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ಕಳೆದ ಆರು ವರ್ಷಗಳಲ್ಲಿ ಭಾರತದ ಪಯಣ ಸರಿಸಾಟಿಯಿಲ್ಲದಾಗಿದೆ ಎಂದರು. ಭಾರತ ಇಂಧನ ಉತ್ಪಾದನಾ ಸಾಮರ್ಥ್ಯ ಮತ್ತು ಜಾಲ ವ್ಯಾಪಕವಾಗಿ ವಿಸ್ತರಿಸಲಾಗಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ವಿದ್ಯುತ್ ಲಭ್ಯವಾಗುವಂತೆ ಮಾಡಲಾಗಿದ್ದು, ಆ ಮೂಲಕ ಆತನ ಸಂಪೂರ್ಣ ಸಾಮರ್ಥ್ಯ ಬಳಕೆಗೆ ಅವಕಾಶ ನೀಡಲಾಗಿದೆ ಎಂದು ಹೇಳಿದರು. ಇಂದು ಭಾರತ, ನವೀಕರಿಸಬಹುದಾದ ಇಂಧನ ಸಾಮರ್ಥ್ಯ ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಮತ್ತು ಅದು ಎಲ್ಲ ಪ್ರಮುಖರಾಷ್ಟ್ರಗಳಿಗಿಂತ ವೇಗವಾಗಿ ಮುಂದುವರಿದಿದೆ. ಭಾರತ ಸದ್ಯ 136 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಹೊಂದಿದ್ದು, ಅದು ನಮ್ಮ ಒಟ್ಟು ಸಾಮರ್ಥ್ಯದ ಶೇ.36ರಷ್ಟಾಗಿದೆ.
2017ರಿಂದೀಚೆಗೆ ಕಲ್ಲಿದ್ದಲು ಆಧಾರಿತ ಅಣುವಿದ್ಯುತ್ ಗಿಂತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಭಾರತದಲ್ಲಿ ವಾರ್ಷಿಕ ಹೆಚ್ಚಾಗುತ್ತಿರುವುದಕ್ಕೆ ಪ್ರಧಾನಮಂತ್ರಿ ಅವರು ಸಂತಸ ವ್ಯಕ್ತಪಡಿಸಿದರು. ಕಳೆದ ಆರು ವರ್ಷಗಳಲ್ಲಿ ಭಾರತದ ಒಟ್ಟು ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಎರಡೂವರೆಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ನವೀಕರಿಸಬಹುದಾದ ಇಂಧನ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವುದರಿಂದ ಕೈಗೆಟಕುವ ದರದಲ್ಲಿ ವಿದ್ಯುತ್ ಲಭ್ಯವಾಗುವ ಜೊತೆಗೆ ಅದರ ಪ್ರಮಾಣ ಹೆಚ್ಚಾಗಿ, ಉತ್ಪಾದನಾ ವೆಚ್ಚ ಕಡಿಮೆಯಾಗಿದೆ ಎಂದು ಹೇಳಿದರು. ಬಲಿಷ್ಠ ಪರಿಸರ ನೀತಿಗಳಿಂದ ದೇಶ ವಿದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸಬಹುದು ಎಂದು ನಾವು ಜಗತ್ತಿಗೆ ತೋರಿಸಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಪರಿಣಾಮಕಾರಿ ಇಂಧನ ಖಾತ್ರಿ ಕೇವಲ ಒಂದು ಸಚಿವಾಲಯ ಅಥವಾ ಇಲಾಖೆಗೆ ಸೀಮಿತವಾಗಿಲ್ಲ. ಬದಲಿಗೆ ಅದು ಇಡೀ ಸರ್ಕಾರದ ಗುರಿಯಾಗಿದೆ ಎಂದು ಹೇಳೀದರು. ನಮ್ಮೆಲ್ಲಾ ನೀತಿಗಳಲ್ಲೂ ಪರಿಣಾಮಕಾರಿ ಇಂಧನ ಸಾಧನೆ ಪರಿಗಣಿಸಲಾಗುತ್ತಿದೆ.
ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೆ ಸಾಧನೆ ಆಧರಿತ ಪ್ರೋತ್ಸಾಹ ಧನ(ಪಿಎಲ್ಐ) ಯಶಸ್ಸಿನ ನಂತರ ಇದೀಗ ಹೆಚ್ಚಿನ ದಕ್ಷತೆಯ ಸೌರ ಫಲಕಗಳಿಗೂ ಅದೇ ರೀತಿ ಪ್ರೋತ್ಸಾಹ ಧನವನ್ನು ನೀಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವ್ಯವಹಾರಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಅಗ್ರ ಆದ್ಯತೆಯಾಗಿದೆ. ಹೂಡಿಕೆದಾರರಿಗೆ ನೆರವು ನೀಡಲು ನಿರ್ದಿಷ್ಟ ಯೋಜನಾ ಅಭಿವೃದ್ಧಿ ಕೋಶಗಳನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. ಮುಂದಿನ ದಶಕದಲ್ಲಿ ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರೀ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಪ್ರಕಟಿಸಿದ ಅವರು, ಪ್ರತಿ ವರ್ಷ ಸುಮಾರು 20 ಬಿಲಿಯನ್ ಮೌಲ್ಯದ ವಾಣಿಜ್ಯ ವ್ಯವಹಾರಗಳು ನಡೆಯುವ ಸಂಭವನೀಯತೆ ಇದೆ ಎಂದರು. ಅವರು ಭಾರತದ ನವೀಕರಿಸಬಹುದಾದ ಇಂಧನ ವಲಯ ಪಯಣದಲ್ಲಿ ಸೇರ್ಪಡೆಯಾಗುವಂತೆ ಹೂಡಿಕೆದಾರರು, ಪ್ರವರ್ತಕರು ಮತ್ತು ವಾಣಿಜ್ಯೋದ್ಯಮಿಗಳಿಗೆ ಆಹ್ವಾನ ನೀಡಿದರು.
Leave a Comment