ಭಟ್ಕಳದ 16 ಗ್ರಾಮ ಪಂಚಾಯತದ 80 ಮತ ಕ್ಷೇತ್ರದಲ್ಲಿ ಮತದಾನ ನಡೆಸಲು ಎಲ್ಲಾ ಸಿದ್ದತೆಯಲ್ಲಿದೆ.
ಭಟ್ಕಳ: ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಯು ಕೋವಿಡ್ ಮಾರ್ಗಸೂಚಿಯಂತೆ ನಡೆಯಲಿದ್ದು, ಕೋವಿಡ್ ಸೋಂಕಿತರು ಸಹ ಮತ ಗಟ್ಟೆಗೆ ಬಂದು ಮತ ಚಲಾಯಿಸುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ ಹೇಳಿದರು.
ಅವರು ಮಂಗಳವಾರದಂದು ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ
ಗ್ರಾಮ ಪಂಚಾಯತ ಚುನಾವಣೆ ಸಿದ್ಧತೆ ಕುರಿತಾದ ಸಭೆಯ ಪೂರ್ವದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.

‘ಜಿಲ್ಲೆಯಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಅದು ಕರಾವಳಿ ಭಾಗದ ತಾಲೂಕುಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರದಲ್ಲಿ ಮೊದಲ ಹಂತದಲ್ಲಿ ನಡೆಯಲಿದೆ. ಇನ್ನು ಘಟ್ಟ ಪ್ರದೇಶದ 7 ತಾಲೂಕುಗಳಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಜನರು ಯಾವುದೇ ಗೊಂದಲಕ್ಕೊಳಗಾಗದೇ ಎಲ್ಲರು ಬಂದು ಮತದಾನದಲ್ಲಿ ಪಾಲ್ಗೊಳ್ಳಬೇಕು. ಈ ಹಿಂದೆಲ್ಲ ಲೋಕಸಭಾ, ವಿಧಾನಸಭಾ ಚುನಾವಣೆಯಂತೆ ಒಂದೇ ಹಂತದಲ್ಲಿ ನಡೆಯುತ್ತಿಲ್ಲವಾಗಿದ್ದು, ಆಯಾ ತಾಲೂಕಿನಲ್ಲಿ ನಿಗದಿಯಂತೆ ಚುನಾವಣೆ ನಡೆಸಲಿದ್ದೇವೆ ಎಂದರು.
ಭಟ್ಕಳದಲ್ಲಿ ಒಟ್ಟು 16 ಗ್ರಾಮ ಪಂಚಾಯತಗಳಿದ್ದು, 80 ಮತಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆ. 284 ಸದಸ್ಯರನ್ನೊಳಗೊಂಡಂತೆ 137 ಮತದಾನ ಕೇಂದ್ರದಲ್ಲಿ ಮತದಾನ ನಡೆಯಲಿದ್ದು ಈ ಪೈಕಿ ಅಕ್ಸುಲರಿ ಮತಗಟ್ಟೆಗಳಾಗಿ 33 ಮತಗಟ್ಟೆ ಸಿದ್ದಪಡಿಸಲಾಗಿದೆ. ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಸಿದ್ದತೆ ಮಾಡಲಾಗಿದ್ದು, ಕುಸಿಯುವ ನೀರು, ಶೌಚಾಲಯ, ವಿದ್ಯುತ್ ಸೌಕರ್ಯಗಳ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.
ತಾಲ್ಲೂಕಿನಲ್ಲಿ ಒಟ್ಟು 92,528 ಮತದಾರರಿದ್ದು ಈ ಪೈಕಿ 46965 ಪುರುಷರು, 45563 ಮಹಿಳಾ ಮತದಾರರಿದ್ದಾರೆ. 610 ಸಿಬ್ಬಂದಿಗಳು ಮತಗಟ್ಟೆ ಮಟ್ಟದ ಅಧಿಕಾರಿಗಳಾಗಿ ಕಾರ್ಯ ಮಾಡಲಿದ್ದಾರೆ.
17 ಅತಿಸೂಕ್ಷ್ಮ ಮತಗಟ್ಟೆ, 38 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಅದು ಸಹ ಪಂಚಾಯತ ಮಟ್ಟದಲ್ಲಿ ನಾಮಪತ್ರ ಸಲ್ಲಿಕೆ ಮುಗಿಸಿ ಅಭ್ಯರ್ಥಿ ಆಯ್ಕೆ ಆದ ಮೇಲೆ ಇನ್ನೊಂದು ಬಾರಿ ಎಲ್ಲಾ ಗ್ರಾಮ ಪಂಚಾಯತ್ ಭೇಟಿ ಮಾಡಿ ಮಾಹಿತಿ ಕಲೆ ಹಾಕಿ ಮತಗಟ್ಟೆ ಗುರುತಿಸಲಿದ್ದೇವೆ.
184 ಮತಪೆಟ್ಟಿಗೆಗಳನ್ನು ಸಿದ್ದತೆ ಮಾಡಲಾಗಿದ್ದು, ಇ.ವಿ.ಎಮ್.ಮಶಿನ್ ಈ ಚುನಾವಣೆಯಲ್ಲಿ ಬಳಕೆ ಮಾಡಲಾಗುವುದಿಲ್ಲ. ಕಾರಣ ಒಬ್ಬ ಅಭ್ಯರ್ಥಿಯಿದ್ದಲ್ಲ ಇ.ವಿ.ಎಮ್. ಮಶಿನ್ ಬಳಸಲು ಸಾಧ್ಯವಿದೆ. ಮತಪತ್ರದ ಮೂಲಕ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದ್ದು, ಪ್ರಾಯೋಗಿಕವಾಗಿ ಇ.ವಿ.ಎಮ್. ಮಶಿನ್ ಮೂಲಕ ರಾಜ್ಯದ ಬೀದರನಲ್ಲಿ ಪಂಚಾಯತ ಚುನಾವಣಾ ಮತದಾನ ನಡೆಯಲಿದೆ.
ಚುನಾವಣೆಯಲ್ಲಿ ಕೆಲಸ ನಿರ್ವಹಿಸುವ ಮತಗಟ್ಟೆಯ ಅಧಿಕಾರಿಗಳಿಗೆ ಸಿಬ್ಬಂದಿಗಳಿಗೆ ಆನಂದಾಶ್ರಮ ಕಾನ್ವೆಂಟ್ ನಲ್ಲಿ ತರಬೇತಿಗೆ ಎಲ್ಲಾ ಸಿದ್ದತೆ ಮಾಡಲಾಗಿದೆ. 8 ಸೆಕ್ಟರ ಅಧಿಕಾರಿಗಳನ್ನು ಎಮ್.ಸಿ.ಸಿ. ತಂಡಗಳಲ್ಲಿ ನೇಮಿಸಲಾಗಿದೆ. ರೂಟ್ ಮ್ಯಾಪ್ ಮಾಡಲಾಗಿದ್ದು ಇದರಲ್ಲಿ ರೂಟ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಧಿಕಾರಿಗಳು, ಸಿಬ್ಬಂದಿಗಳನ್ನು ಆಯಾ ಪಂಚಾಯತಗೆ ಕಳುಹಿಸಲು 35 ವಾಹನವನ್ನು 15 ಬಸ್, 14 ಟೆಂಪೋ, 6 ಜೀಪ್ ವ್ಯವಸ್ಥೆ ಮಾಡಲಾಗಿದೆ.
ಮತಪೆಟ್ಟಿಗೆ ಸಂಗ್ರಹಣಾ ಕೇಂದ್ರ ಹಾಗೂ ಮತ ಎಣಿಕೆ ಕೇಂದ್ರವನ್ನಾಗಿ ಶ್ರೀ ಗುರು ಸುಧೀಂದ್ರ ಕಾಲೇಜನ್ನು ಆಯ್ಕೆ ಮಾಡಲಾಗಿದೆ. ಹೆಲ್ಪ್ ಡೆಸ್ಕಗಾಗಿ ಹೆಲ್ಪ್ ಡೆಸ್ಕ ಬಿ.ಎಲ್.ಓ. ನೇಮಕ ಮಾಡಲಾಗಿದೆ. ಕೋವಿಡ್- 19 ಸಂಬಂಧಿಸಿ ಒಟ್ಟು 300 ಜನ ಆಶಾ ಎ.ಎನ್.ಎಂ/ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ ಎಂದ ಅವರು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಸೋಂಕಿತರಿಗೂ ಮತದಾನಕ್ಕೆ ಅವಕಾಶ ಮಾಡಿಕೊಡುತ್ತಿದ್ದೇವೆ. ಮತದಾನದ ಕೊನೆಯ ಅವಧಿಯಲ್ಲಿ ಸೋಂಕಿತರನ್ನು ಕರೆತಂದು ಮತದಾನ ಮಾಡಿಸಲಿದ್ದೇವೆ. ಮತಗಟ್ಟೆಯ ಸಿಬ್ಬಂದಿ ಅಧಿಕಾರಿಗಳು ಪಿ.ಪಿ.ಇ. ಕಿಟ್ ಧರಿಸಿ ಸೋಂಕಿತರು ಬಂದ ವೇಳೆ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಕೋವಿಡ್ ಮಾರ್ಗಸೂಚಿಯನ್ವಯ ಚುನಾವಣಾ ಪ್ರಕ್ರಿಯೆ ನಡೆಸಲಾಗುವುದು. ಮಾದರಿ ನೀತಿ ಸಂಹಿತೆಯು ನಗರ ಪ್ರದೇಶದಲ್ಲಿ ಇಲ್ಲವಾಗಿದ್ದು ನೀತಿ ಸಂಹಿತೆ ಚುನಾವಣೆ ನಡೆಯಲಿರುವ ಗ್ರಾಮೀಣ ಪ್ರದೇಶಗಳಲ್ಲಿ ಅನ್ವಯವಾಗಲಿದೆ. ಈಗಾಗಲೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಗಮನ ಹರಿಸಲು ತಂಡ ರಚನೆ ಮಾಡಲಾಗಿದ್ದು, ಶೈಕ್ಷಣಿಕ ಸಂಸ್ಥೆಗಳನ್ನು, ಧಾರ್ಮಿಕ ಸ್ಥಳವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳಬಾರದು. ಸರಕಾರಿ ನೌಕರರು ಪ್ರಚಾರಕ್ಕೆ ತೆರಳಬಾರದು. ಹಣ ಹಂಚಬಾರದು, ಆಮಿಷ ಒಡ್ಡಬಾರದು, ಪ್ರಚೋದನಾಕಾರಿ ಹೇಳಿಕೆ ನೀಡಬಾರದು ಇವೆಲ್ಲ ಅಂಶವನ್ನು ತಾಲೂಕಾ ಮಟ್ಟದ ಮಾದರಿ ನೀತಿ ಸಂಹಿತೆ ತಂಡ ಗಮನಿಸಲಿದೆ ಎಂದರು.
ಈಗಾಗಲೇ ನಡೆದ ಚುನಾವಣೆಯಲ್ಲಿ ಹೊರಜಿಲ್ಲೆಯ ಪೋಲಿಸರನ್ನು ಬಳಸಿಕೊಳ್ಳದೇ ಶಿಸ್ತುಬದ್ದ, ಶಾಂತಿಯುತವಾಗಿ ಚುನಾವಣೆ ನಡೆಸಿದ್ದು ಈಗಿನ ಗ್ರಾಮ ಪಂಚಾಯತ ಚುನಾವಣೆಗು ಸಹ ಜಿಲ್ಲೆಯ ಪೋಲಿಸರನ್ನೆ ಎರಡು ಹಂತದಲ್ಲಿ ಆಯ್ಕೆ ಮಾಡಿ ಚುನಾವಣೆ ನಡೆಸಲಿದ್ದೇವೆ ಎಂದು ಹೇಳಿದರು.
ಕೋವಿಡ್ ಜಿಲ್ಲೆಯಲ್ಲಿ ಭಟ್ಕಳದಲ್ಲಿಯೇ ಆರಂಭವಾಗಿದ್ದು ತದನಂತರ ಸಾರ್ವಜನಿಕರ ಸಹಕಾರದಿಂದ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಾ ಬಂದಿದ್ದು ಈಗ ಗಣನೀಯ ಪ್ರಮಾಣದಲ್ಲಿ ಇಳಿಕೆಯಲ್ಲಿಯೂ ಭಟ್ಕಳದ ಮೊದಲ ಸ್ಥಾನದಲ್ಲಿದೆ. ಆದರೆ ಜಾಗತಿಕ ಮಟ್ಟದಲ್ಲಿ ಕೋರೊನಾ 2ನೇ ಅಲೆ ಆರಂಭವಾಗುವ ಬಗ್ಗೆ ತಜ್ಞರು ಮೂನ್ಸುಚನೆ ನೀಡಿದ್ದು, ಚಳಿಗಾಲದಲ್ಲಿ ಕೋರೊನಾ ದಾಳಿಯಿಂದ ತಪ್ಪಿಸಿಕೊಳ್ಳಲು ಕಡ್ಡಾಯ ಮಾಸ್ಕ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ.
ಇನ್ನು ರೈತರು ತಾವು ಬೆಳೆಗೆ ಬೆಳೆಯ ಸಂರಕ್ಷಣೆ ಮಾಡಲು ಲೈಸೆನ್ಸ ಹೊಂದಿದ ಬಂದೂಕು ಇಟ್ಟುಕೊಂಡಿದ್ದು, ಅವರಿಗೆ ಚುನಾವಣೆಯಲ್ಲಿ ರಿಯಾಯಿತಿ ನೀಡಲಾಗಿದೆ. ಆದರೆ ವ್ಯಕ್ತಿ ಅವರ ಸ್ವಯಂ ರಕ್ಷಣೆಗಾಗಿ ಲೈಸೆನ್ಸ್ ಹೊಂದಿರುವವರು ಹಾಗೂ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಬಂದೂಕು ಹೊಂದಿರುವ ವ್ಯಕ್ತಿಗಳು ತಕ್ಷಣಕ್ಕೆ ಪೊಲೀಸ್ ಠಾಣೆಗೆ ಒಪ್ಪಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಭರತ್ ಎಸ್., ಎ.ಎಸ್.ಪಿ. ನಿಖಿಲ್ ಬಿ., ತಹಸೀಲ್ದಾರ ಎಸ್. ರವಿಚಂದ್ರ, ಸಿಪಿಐ ದಿವಾಕರ್ ಪಿ.ಎಮ್. ಉಪಸ್ಥಿತರಿದ್ದರು.
Leave a Comment