ಕಾರವಾರ :- ಕೋಟ್ಯಾಂತರ ಬೆಲೆ ಬಾಳುವ ಅತ್ಯಂತ ವಿರಳವಾಗಿ ಸಿಗುವ ‘ತಿಮಿಂಗಿಲದ ವಾಂತಿ’ಯ (ಅಂಬೆರ್ಗ್ರಿಸ್) ಸುಮಾರು ಒಂದು ಕೆ.ಜಿ ತೂಕದ ತುಣುಕು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಮೀನುಗಾರನಿಗೆ ದೊರೆತಿದ್ದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಮುರುಡೇಶ್ವರದ ಕಡಲತೀರದಲ್ಲಿ ಅಲ್ಲಿಯೇ ಮೀನುಗಾರಿಕೆ ನಡೆಸುತಿದ್ದ ಜನಾರ್ಧನ್ ಹರಿಕಾಂತ್ ಎಂಬ ಮೀನುಗಾರ ಕಡಲತೀರದಲ್ಲಿ ತೆರಳುವಾಗ ತಿಮಿಂಗಿಲದ ವಾಂತಿ ಕಂಡಿದ್ದು ಕಲ್ಲಿನಾಕಾರದಲ್ಲಿತ್ತು.
ಇದನ್ನು ಮನೆಗೆ ತಂದು ತಿಳಿದವರ ಮೂಲಕ ಪರೀಕ್ಷಿಸಿದಾಗ ಇದು ತಿಮಿಂಗಿಲದ ವಾಂತಿ ಎಂದು ಗೊತ್ತಾಗಿದ್ದು, ಕೋಟ್ಯಾಂತರ ರುಪಾಯಿ ಬೆಲೆಬಾಳುತ್ತದೆ ಎಂದು ತಿಳಿದಿದ್ದಾರೆ. ನಂತರ ನಮ್ಮ ದೇಶದಲ್ಲಿ ಇದನ್ನು ಮಾರಲು ಅನುಮತಿ ಇಲ್ಲ ಎಂಬುದನ್ನು ತಿಳಿದ ಅವರು ಹೊನ್ನಾವರ ವಿಭಾಗದ ಅರಣ್ಯಾಧಿಕಾರಿ ರಂಗನಾಥ್ ರವರಿಗೆ ಹಸ್ತಾಂತರಿಸಿದ್ದಾರೆ.
*ಏನಿದು ತಿಮಿಂಗಿಳದ ವಾಂತಿ? ವಿಶೇಷ ಏನು?*
ಅಂಬೆರ್ಗ್ರಿಸ್ ಎಂದು ಇಂಗ್ಲೀಷ್ ನಲ್ಲಿ ಹೇಳುವ ಹಾಗೂ ಕನ್ನಡದಲ್ಲಿ ತಿಮಿಂಗಿಲ ವಾಂತಿ ಎಂದರೆ ತಿಮಿಂಗಿಲ ಸೇವಿಸಿದ ಆಹಾರ ಜೀರ್ಣವಾಗದೇ ಹೊರಕ್ಕೆ ಹಾಕಿದಾಗ ದ್ರವ ಮಿಶ್ರಿತ ಘನ ವಸ್ತುವಿಗೆ ಅಂಬೆರ್ಗ್ರಿಸ್ ಅಥವಾ ತಿಮಿಂಗಿಲ ವಾಂತಿ ಎಂದು ಹೇಳುತ್ತಾರೆ.
ಈ ಕುರಿತು ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ರವರು ಹೇಳುವಂತೆ ಎಲ್ಲಾ ತಿಮಿಂಗಿಲಗಳ ವಾಂತಿ ಹೆಚ್ಚು ಬೆಲೆಬಾಳದು.ಸ್ಪೆರ್ಮ್ ವೇಲ್ ಪ್ರಭೇದದ ತಿಮಿಂಗಿಲಗಳಿಂದ ಮಾತ್ರ ಅಂಬೆರ್ಗ್ರಿಸ್ ಹೊರ ಬರುತ್ತದೆ.
ಪಶ್ಚಿಮ ಕರಾವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಇದ್ದು, ಪಶ್ಚಿಮ ಭಾಗದಿಂದಲೇ ವಲಸೆ ಹೋಗುತ್ತವೆ. ಅವು ಮಣಕಿ (ಸ್ಕ್ವಿಡ್), ಕಪ್ಪೆ ಬೊಂಡಾಸ್ (ಕಟಲ್ ಫಿಶ್) ಮೀನುಗಳನ್ನು ಬೇಟೆಯಾಡಿ ತಿನ್ನುತ್ತವೆ.
ಕೆಲವೊಮ್ಮೆ ಈ ಮೀನುಗಳ ಗಟ್ಟಿಯಾದ ಎಲುಬುಗಳು ತಿಮಿಂಗಿಲದಲ್ಲಿ ಸಂಪೂರ್ಣವಾಗಿ ಜೀರ್ಣವಾಗುವುದಿಲ್ಲ. ಅದು ಜೀರ್ಣಾಂಗದಲ್ಲೇ ತಿಂಗಳು, ವರ್ಷಗಟ್ಟಲೆ ಉಳಿಯುತ್ತದೆ. ಇದರಿಂದ ತಿಮಿಂಗಿಲ ಕಿರಿಕಿರಿ ಅನುಭವಿಸುತ್ತದೆ. ಕೊನೆಗೆ ವಾಂತಿ ಮಾಡಿ ಹೊರಹಾಕುತ್ತದೆ. ಕೆಲವೊಮ್ಮೆ ಮಲದಲ್ಲೂ ಸೇರಿರುತ್ತದೆ.
ಮೀನಿನ ಮೂಳೆಗಳು ತಿಮಿಂಗಿಲದ ಹೊಟ್ಟೆಯಲ್ಲಿ ತಿಂಗಳುಗಟ್ಟಲೆ ಸಂಗ್ರಹವಾಗಿದ್ದಾಗ ಹಲವು ರಾಸಾಯನಿಕ ಪ್ರಕ್ರಿಯೆಗಳಿಗೆ ಒಳಗಾಗುತ್ತದೆ. ಅದು ಮೇಣದಂಥ ರಚನೆಯಾಗಿ ಪರಿವರ್ತನೆಯಾಗುತ್ತದೆ.
ಈ ಹಂತದಲ್ಲಿ ಆ ವಸ್ತು ಸುಗಂಧ ಪಡೆದುಕೊಂಡಿರುತ್ತದೆ. ತಿಮಿಂಗಿನ ಹೊರಹಾಕಿದ ವಾಂತಿಯು ಮೊದಲು ಬಾರವಾಗಿದ್ದು ನಂತರ ಸಮುದ್ರದಲ್ಲಿ ರಾಸಾಯನಿಕ ಪ್ರಕ್ರಿಯೆಯಲ್ಲಿ ಗಟ್ಟಿಯಾಗಿ ನಿಧಾನ ಗತಿಯಲ್ಲಿ ನೀರಿನಲ್ಲಿ ತೇಲುತ್ತದೆ.ಕೆಲವೊಮ್ಮೆ ಪ್ರಖರ ಬಿಸಿಲಿಗೆ ಕರಗುವ ಸಾಧ್ಯತೆಯಿರುತ್ತದೆ.
‘ಒಂದುವೇಳೆ, ತಿಮಿಂಗಿಲವು ಮೀನುಗಳನ್ನು ತಿಂದ ಒಂದೆರಡು ವಾರಗಳಲ್ಲೇ ಎಲುಬುಗಳನ್ನು ಹೊರ ಹಾಕಿದರೆ ಅದು ಅಸಹನೀಯ ವಾಸನೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು.
ಕೋಟಿ ಬೆಲೆ ಏಕೆ?
ಬಲು ಅಪರೂಪಕ್ಕೆ ಒಂದು ಬಾರಿ ಮಾತ್ರ ತಿಮಿಂಗಿಲಗಳು ವಾಂತಿ ಮಾಡಿಕೊಳ್ಳುತ್ತದೆ. ಒಂದು ತಿಮಿಂಗಿಲ ಒಂದು ಕೆಜಿ ಇಂದ ಹತ್ತು ಕೆಜಿಗೂ ಹೆಚ್ಚು ವಾಂತಿ ಮಾಡಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಇದ್ದಾಗಲೇ ಜೀರ್ಣಾಂಗ ದಲ್ಲಿ ಇವು ರಾಸಾಯನಿಕಕ್ಕೆ ಒಳಗಾಗುವುದರಿಂದ ಇದರ ವಾಂತಿ ಯಲ್ಲಿ ಸುಗಂಧ ಭರಿತವಾಗಿರುತ್ತದೆ. ಮೊದಲು ಇದನ್ನು ಸುಟ್ಟಾಗ ವ್ಯಾಕ್ಸ್ ನಂತೆ ಕರಗಿ ಕೆಟ್ಟ ವಾಸನೆ ಬರುತ್ತದೆ. ಆದರೇ ನಂತರ ಸುಂಗಂಧಬರಿತವಾಗಿರುತ್ತದೆ.
ಇದನ್ನು ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಅತೀ ಬೇಡಿಕೆ ಇದೆ. ಹೀಗಾಗಿ ಪಾಶ್ಚಿಮಾತ್ಯ ರಾಜ್ಯದಲ್ಲಿ ಇದಕ್ಕೆ ಒಂದು ಕೆಜಿಗೆ ಕೋಟಿ ಬೆಲೆ ಇರುತ್ತದೆ. ಹೀಗಾಗಿ ವೇಲ್ ಗಳ ಮಾರಾಣ ಹೋಮವು ಸಹ ನಡೆಯುತಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ WWF ಹಾಗೂ ನಮ್ಮದೇಶದ ಅರಣ್ಯ ಕಾಯ್ದೆ ಪ್ರಕಾರ ಇವುಗಳನ್ನು ಸಂಗ್ರಹಿಸುವುದು ,ಮಾರುವುದು ಕಾನೂನು ಬಾಹ್ಯವಾಗಿದ್ದು ಶಿಕ್ಷಾರ್ಹ ಅಪರಾಧ.
ಇನ್ನು ಹಲವು ದೇಶದಲ್ಲಿ ಇವುಗಳ ಮಾರಾಟ,ಆಮದಿಗೆ ಸಹ ಅನುಮತಿ ಇದೆ. ಹೀಗಾಗಿ ಇದರ ಮೌಲ್ಯ ಹೆಚ್ಚು ಪಡೆದುಕೊಂಡಿದ್ದು , ಕಳ್ಳಹಾದಿಯಲ್ಲಿ ಸಹ ಮಾರಾಟವಾಗುತ್ತದೆ.
ಸಿಕ್ಕ “ತಿಮಿಂಗಿಲದ ವಾಂತಿ” ಸುದುಪಯೋಗವಾಗಲಿ.
ಸದ್ಯ ಅರಣ್ಯ ಇಲಾಖೆ ಬಳಿ ಹಸ್ತಾಂತರ ವಾಗಿರುವ ಈ ಅಂಬೆರ್ಗ್ರಿಸ್ ಅತೀ ವಿರಳವಾಗಿ ದೊರಕುವ ಹಾಗೂ ಕೋಟಿ ಬೆಲೆ ಬಾಳುವ ಇದು ನೋಡ ಸಿಗುವುದು ಅಪರೂಪ.
ಅರಣ್ಯ ಇಲಾಖೆ ಸುಪರ್ಧಿಯಲ್ಲಿ ಇದ್ದರೆ ಇದರ ಅಧ್ಯಯನಕ್ಕೆ ಸಿಗುವುದಿಲ್ಲ. ಹೀಗಾಗಿ ಕಾರವಾರದಲ್ಲಿ ಇರುವ ವಿಜ್ಞಾನ ಅಧ್ಯಯನ ಕೇಂದ್ರದಕ್ಕೆ ನೀಡಿದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಸಹಾಯ ವಾಗಲಿದೆ ಎಂಬುದು ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಶಿವಕುಮಾರ ಹರಗಿ ರವರು ಮಾತು.
Leave a Comment