ಭಟ್ಕಳ: ಪ್ರಕ್ರತಿಯ ಮುನಿಸೋ ಅಥವಾ ವಾತಾವರಣದ ವೈಪರೀತ್ಯವೋ ಕೋರೋನಾ ವೇಳೆಯೇ ಈ ವರ್ಷ ಜಲ ಗಂಡಾಂತರದಿಂದ ಕರಾವಳಿಯ ಭಟ್ಕಳದ ಸಮುದ್ರ ತೀರ ಪ್ರದೇಶದ ಜನರಿಗೆ ಚಂಡಮಾರುತದ ಅಬ್ಬರದಿಂದ ಸಮುದ್ರ ತಡೆಗೋಡೆ, ರಸ್ತೆ ಸಹಿತ ವಿದ್ಯುತ ಕಂಬಗಳೆಲ್ಲವೂ ನಾಶಗೊಂಡು ಮನೆಗಳಿಗೆ ನೀರು ನುಗ್ಗಿದ್ದರ ಹಿನ್ನೆಲೆ ಇವೆಲ್ಲವೂ ಶೀಘ್ರದಲ್ಲಿ ಸರಿಪಡಿಸಿದ್ದಲ್ಲಿ ಅನೂಕೂಲವಾಗಲಿದ್ದು ಇಲ್ಲವಾದಲ್ಲಿ ಮುಂಬರಲಿರುವ ಮಳೆಗಾಲ ಸ್ಥಳೀಯ ಮೀನುಗಾರ ಜನರ ಬದುಕನ್ನು ಕಸಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂಬ ಆತಂಕ ವ್ಯಕ್ತವಾಗಿದೆ.

ಅದೆಷ್ಟೋ ವರ್ಷದ ಹಿಂದೆ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸಮುದ್ರದ ಶಿಲೆಯ ತಡೆಗೋಡೆಗಳು ತೌಕ್ತೆ ಚಂಡಮಾರುತದ ರಭಸದ ಹೊಡೆತಕ್ಕೆ ಸಮುದ್ರ ಪಾಲಾಗಿದ್ದು, ಹಿಂದೆಂದು ಕಂಡು ಕೇಳರಿಯದ ಚಿತ್ರಣವನ್ನು ಸಮುದ್ರ ತೀರದ ಜನರು ನೋಡಿ ಆತಂಕಕ್ಕೊಳಗಾಗಿದ್ದಾರೆ.
ಪ್ರಮುಖವಾಗಿ ಇಲ್ಲಿನ ಮಾವಿನಕುರ್ವೆ ಬಂದರು, ತಲಗೋಡ, ಕರಿಕಲ್ ಭಾಗವೂ ಸಮುದ್ರ ತೀರದ ಪ್ರದೇಶದ ವ್ಯಾಪ್ತಿಗೆ ಬರಲಿದ್ದು, ಜನರು ಹಾಕಲಾದ ತಡೆಗೋಡೆಗಳಿಂದ ಮಳೆಗಾಲ ಹಾಗೂ ಇಂತಹ ಚಂಡಮಾರಿತದ ಸಮಯದಲ್ಲಿ ನೆಮ್ಮದಿ ನಿದ್ರೆಗೆ ಜಾರುತ್ತಿದ್ದ ಕಡಲವಾಸಿಗಳು ಈ ಚಂಡಮಾರುತಕ್ಕೆ ತಡೆಗೋಡೆಗಳೆಲ್ಲವೂ ಸಮುದ್ರ ಪಾಲಾಗಿವೆ. ಇದು ಅವರಿಗೆ ಮುಂಬರಲಿರುವ ಮಳೆಗಾಲದಲ್ಲಿ ಎಲ್ಲಿ ಸಮುದ್ರದ ನೀರು ಉಕ್ಕಿ ಬಂದು ಮತ್ತೆ ನಿರಾಶ್ರೀತರಾಗುತ್ತೇವೆ ಎನ್ನುವ ಭಯದಲ್ಲಿ ತಾಲ್ಲೂಕಿನ ಕಡಲತೀರವಾಸಿಗಳು ಚಿಂತಾಕ್ರಾಂತರಾಗಿದ್ದಾರೆ.

ಸದ್ಯ ಈ ಭಾಗದ ಕಡಲತೀರದ ಮಕ್ಕಳಲ್ಲಿ ಚಂಡಮಾರುತದಿಂದಾದ ದೊಡ್ಡ ಹೊಡೆತವೇ ತಡೆಗೋಡೆ ನೀರು ಪಾಲಾಗಿ ಅಂದಾಜು 300-400 ಮೀ. ದೂರದ ಕಡಲ ತೀರದ ಪ್ರದೇಶವನ್ನು ಸಮುದ್ರ ಆವರಿಸಿದ್ದು ರಸ್ತೆ ಹಾಗೂ ಮಣ್ಣುಗಳು ಕುಸಿತಕ್ಕೊಳಗಾಗಿ ಒಂದು ರೀತಿ ಸೇತುವೆ ಮಾದರಿಯಲ್ಲಿ ಮಾರ್ಪಟ್ಟಿದೆ.
ಈ ಪ್ರದೇಶಗಳಲ್ಲಿ ಹಾನಿಯಾದ ತಡೆಗೋಡೆ ಹಾಗೂ ರಸ್ತೆಯ ಅಂದಾಜು ಮೊತ್ತ ಕೋಟಿಗೂ ಅಧಿಕವಾಗಿದ್ದು, ಒಂದು ಮಾಹಿತಿಯ ಪ್ರಕಾರ ಮಳೆಗಾಲದ ಪೂರ್ವದಲ್ಲಿ ತಡೆಗೋಡೆ ಪುನರ್ ನಿರ್ಮಾಣ ಕಷ್ಟಸಾಧ್ಯವಾಗಿದ್ದರು ಸಹ ತಕ್ಕಮಟ್ಟಿಗೆ ತಾತ್ಕಾಲಿಕ ತಡೆಗೋಡೆಯನ್ನು ಮರಳು ತುಂಬಿದ ಚೀಲವನ್ನು ಮಣ್ಣು ಕುಸಿದ ಜಾಗದಲ್ಲಿ ಹಾಕಿ ಬಳಿಕ ಅಳಿದುಳಿದ ಬಂಡೆ ಕಲ್ಲನ್ನು ತಡೆಗೋಡೆಯನ್ನಾಗಿ ಹಾಕುವ ಬಗ್ಗೆ ತಿಳಿದು ಬಂದಿದೆ. ಈಗಾಗಲೇ ಸ್ಥಳಕ್ಕೆ ತಡಗೋಡೆ ನಿರ್ಮಾಣದ ಇಂಜಿನಿಯರ ಹಾಗೂ ಗುತ್ತಿಗೆದಾರರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು ಈ ಕಾರ್ಯವೂ ಬಹಳ ಸವಾಲಾಗಿದ್ದು ಆದರೆ ಸದ್ಯಕ್ಕೆ ಇದರ ತಾತ್ಕಾಲಿಕ ಕೆಲಸವನ್ನು ಮಾಡುವ ಭರವಸೆ ನೀಡಿದ್ದಾರೆ.

ಬದುಕು ಮೂರಾಬಟ್ಟೆ:ಕೇವಲ ತಡೆಗೋಡೆಯಿಂದ ಈ ಭಾಗದ ಸುಮಾರು 20-30 ನಿವಾಸಿಗರ ಮನೆಗೆ ನೀರು ನುಗ್ಗಿ ಮನೆಯ ಆಹಾರ ಪದಾರ್ಥಗಳು, ವಸ್ತುಗಳು, ಬಟ್ಟೆಗಳು ಹಾನಿಯಾಗಿದೆ. ಇದರ ಪರಿಣಾಮವಾಗಿ ಮನೆಯಲ್ಲಿ ವ್ರದ್ದರು, ಮಕ್ಕಳು, ಮಹಿಳೆಯರು ವಾಸವಿರಲು ಸಾದ್ಯವಾಗದೇ ಸಂಬಂಧಿಕರ ಮನೆಗೆ ತೆರಳಿದ್ದಾರೆ. ಅತ್ತ ಕೋರೊನಾ ಹಿನ್ನೆಲೆ ಜನರು ಬೇರೆ ಅವರ ಮನೆಗೆ ತೆರಳಲು ಭಯಪಡುವ ದಿನದಲ್ಲಿ ಅನಿವಾರ್ಯವಾಗಿ ಸಂಬಂಧಿಕರ ಮನೆಗೆ ತೆರಳಬೇಕಾದ ಸ್ಥಿತಿ ಉದ್ಬವಿಸಿದೆ.
ಒಟ್ಟಾರೆ ಚಂಡಮಾರುತದ ಅಬ್ಬರ ತಣ್ಣಗಾದರು ಸಹ ಭಟ್ಕಳದ ಮಾವಿನಕುರ್ವೆ, ಬಂದರು, ತಲಗೋಡ, ಕರಿಕಲ್ ಗ್ರಾಮದ ನಿವಾಸಿಗರಲ್ಲಿ ಆತಂಕ ಹಾಗೇಯೇ ಇದ್ದು, ಸದ್ಯ ಸಚಿವರು, ಶಾಸಕರಾದಿಯಲ್ಲಿ ಭೇಟಿ ನೀಡಿ ಕೊಟ್ಟ ಭರವಸೆಯಂತೆ ಶೀಘ್ರವಾಗಿ ಕೆಲಸಗಳು ನಡೆದಲ್ಲಿ ನಿವಾಸಿಗರು ನೆಮ್ಮದಿಯಿಂದ ಬದುಕಲು ಸಾದ್ಯವಿದ್ದು ಇಲ್ಲವಾದರೆ ಈಗಿರುವ ಪರಿಸ್ಥಿತಿ ಇನ್ನಷ್ಟು ಹದಗೆಡುವದಂತು ಸತ್ಯ.
ತೌಕ್ತೆ ಚಂಡಮಾರುತದಿಂದ ಹಾನಿಯಾದ ಶಿಲೆಯ ತಡೆಗೋಡೆ ಹಾಗೂ ಸಂಪರ್ಕ ರಸ್ತೆಗಳು ಮಳೆಗಾಲಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಕಾರಣ ಕಷ್ಟಸಾಧ್ಯವಾಗಿದೆ. ಮಳೆಗಾಲದ ಪೂರ್ವದಲ್ಲಿ ಸರ್ಕಾರ ತಾತ್ಕಾಲಿಕ ತಡಗೋಡೆ ನಿರ್ಮಾಣ ಮಾಡದೇ ಇದಲ್ಲಿ ಮಳೆಗಾಲದಲ್ಲಿ ಬರುವ ದೈತ್ಯಾಕಾರದ ಸಮುದ್ರದ ಅಲೆಗಳು ಕಡಲತೀರದ ಮನೆ ಹಾಗೂ ಕೃಷಿ ಭೂಮಿಗೆ ನುಗ್ಗಿ ಅನಾಹುತ ಸೃಷ್ಠಿಸುವುದು ಖಂಡಿತ. ಭಟ್ಕಳ ಶಾಸಕ ಸುನೀಲ ನಾಯ್ಕ ಈಗಾಗಲೇ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಹಾನಿಯ ಮಾಹಿತಿ ಪಡೆದುಕೊಂಡಿದ್ದು ಶೀಘ್ರವೇ ಪುನರ್ ನಿರ್ಮಾಣ ಮಾಡಿಕೋಡುವ ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ಮುಖಂಡ ರಮೇಶ ಖಾರ್ವಿ ತಿಳಿಸಿದ್ದಾರೆ.
ಚಂಡಮಾರುತದ ಅಬ್ಬರ ಇಳಿದು ಇಂದು 2-3 ದಿನಗಳು ಕಳೆದಿದ್ದು, ಈ ಸಮುದ್ರ ತೀರದ ರಸ್ತೆಯಲ್ಲಿ ಸಂಚಾರ ಮಾಡುವುದು ಯಾವತ್ತಿದ್ದರು ಆತಂಕವೇ ಸರಿ. ಇದರ ಹಿನ್ನಲೆ ಸದ್ಯಕ್ಕೆ ದ್ವಿ ಚಕ್ರ ವಾಹನ ಹೊರತಾಗಿ ಉಳಿದೆಲ್ಲ ವಾಹನದ ಸಂಚಾರ ಬಂದ್ ಮಾಡಲಾಗಿದೆ. ಒಂದಾನು ವೇಳೆ ಈ ನೀರು ಪಾಲಾದ ತಡೆಗೋಡೆ, ರಸ್ತೆಯ ಸಂಚಾರ ಶೀಘ್ರದಲ್ಲಿ ಆಗದಿದ್ದರೆ ಮೀನುಗಾರಿಕೆ ವಾಹನ ಸಂಚಾರಕ್ಕೆ ತೊಂದರೆಯಾಗಲಿದ್ದು, ಮೀನುಗಾರಿಕೆ ನಂಬಿ ಬದುಕು ಸಾಗಿಸುವವರಿಗೆ ಇದು ದುಸ್ಥಿತಿಯೇ ಆಗಲಿದೆ. ಚಂಡಮಾರುತದಿಂದ ವಿದ್ಯುತ ಕಂಬ, ಮನೆಗೆ ಸಂಪರ್ಕವಿರುವ ಕುಡಿಯುವ ನೀರಿನ ಪೈಪಗಳೆಲ್ಲವೂ ಸಮುದ್ರ ಪಾಲಾಗಿದೆ ಎಂಬುದು ಸ್ಥಳೀಯ ಮೀನುಗಾರ ಮುಖಂಡ ರಾಮಾ ಖಾರ್ವಿ ಅವರ ಅಭಿಪ್ರಾಯವಾಗಿದೆ.
Leave a Comment