ಹೊನ್ನಾವರ: ತಾಲೂಕಿನ ಕರ್ಕಿ ಗ್ರಾಮದ, ರಾಮೇಶ್ವರಕಂಬಿಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ರಾಮನಾಥ ನಾಯ್ಕ, ತಮ್ಮ 80ನೇ ವಯಸ್ಸಿನಲ್ಲಿ ಇಂದು ನಸುಕಿನ ಜಾವ ತಮ್ಮ ನಿವಾಸದಲ್ಲಿ ಮೃತ ಪಟ್ಟರು. 80ರ ದಶಕದಲ್ಲಿ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ದಶಕಗಳ ಕಾಲ ಪಕ್ಷವನ್ನು ಸಮರ್ಥವಾಗಿ ಮುನ್ನೆಡೆಸಿದ್ದರು.

ಕರ್ಕಿ ಮಂಡಲ ಪಂಚಾಯತನ ಪ್ರಥಮ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಅವರದಾಗಿತ್ತು. ಅವರು ಕೆಲ ತಿಂಗಳ ಹಿಂದೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಒಂದು ಕಣ್ಣಿನ ದೃಷ್ಠಿ ಕಳೆದುಕೊಂಡು ಮಾನಸಿಕವಾಗಿ ನೊಂದಿದ್ದರು. ಅವರು ಪತ್ನಿ, ನಾಲ್ಕು ಗಂಡು, ಓರ್ವ ಹೆಣ್ಣು, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಅಭಿಮಾನಿಗಳನ್ನು ಆಗಲಿದ್ದಾರೆ. ಕಂಬನಿ: ರಾಜಕೀಯ ಕ್ಷೇತ್ರದಲ್ಲಿ ಕೈ, ಬಾಯಿ ಸ್ವಚ್ಛವಾಗಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಮುನ್ನೆಡಿಸಿದ ರಾಮನಾಥ ನಾಯ್ಕರನ್ನು ಕಳೆದುಕೊಂಡ ಕಾಂಗ್ರೆಸ್ ಪಕ್ಷ ಈ ಭಾಗದಲ್ಲಿ ಬಡವಾಗಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ಕಂಬನಿ ಮಿಡಿದಿದ್ದಾರೆ. ರಾಮನಾಥ ನಾಯ್ಕ ಸಾವಿನ ಕುರಿತಂತೆ ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಶಾಸಕಿ ಶ್ರೀಮತಿ ಶಾರದಾ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣಾ ನಾಯ್ಕ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮಜಿದ್ ಶೇಖ್, ಜಿಲ್ಲಾ ಕಾಂಗ್ರೆಸ್ ಕಿಸಾನ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ, ಕೆ.ಪಿ.ಸಿ.ಸಿ. ಸದಸ್ಯ ವಿನೋದ ನಾಯ್ಕ, ಮಂಜುನಾಥ ಶಾನಭಾಗ, ಮಾಜಿ ತಾ.ಪಂ. ಸದಸ್ಯ ಅಶೋಕ ನಾಯ್ಕ, ಇನ್ನೂ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.
Leave a Comment