’48 ಗಂಟೆಯಲ್ಲಿ ನ್ಯಾಯಕ್ಕೆ ಆಗ್ರಹ- ಅನ್ಯಾಯಕ್ಕೆ ಹೋರಾಟದಿಂದಲೇ ತಕ್ಕ ಉತ್ತರಕ್ಕೆ ನಿರ್ಧಾರ- ರವಿಂದ್ರ ನಾಯ್ಕ’
ಭಟ್ಕಳ: ಕಾನೂನಿನ ವಿಧಿ ವಿಧಾನ ಅನುಸರಿಸದೇ ತಾಲೂಕಾದ್ಯಂತ ಅರಣ್ಯವಾಸಿಗಳ ಮೇಲೆ ಜರುಗುತ್ತಿರುವ ದೌರ್ಜನ್ಯ, ಕಿರುಕುಳ, ಖಂಡನಾರ್ಹ. ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯ ನಿಯಂತ್ರಿಸಲು ಜನಪ್ರತಿನಿಧಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಮತ್ತು ಅರಣ್ಯ ಇಲಾಖೆಗೆ ಮುಂದಿನ 48 ಗಂಟೆಯಲ್ಲಿ ನ್ಯಾಯಕ್ಕಾಗಿ ಗಡುವು ನೀಡಲಾಗಿದೆ ಎಂದು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಶುಕ್ರವಾರದಂದು ಇಲ್ಲಿನ ಹೆಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿನಗರದಲ್ಲಿನ ಶನಿಯಾರ ನಾಯ್ಕ ಕುಟುಂಬದವರ ಅಂಗಡಿ ರಿಪೇರಿ ವೇಳೆ ಅರಣ್ಯ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ಸ್ಥಳ ಭೇಟಿಯ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

‘ಅನಾದಿಕಾಲದಿಂದ ಅನುಭವಿಸುತ್ತಿರುವ ಕಟ್ಟಡದ ರಿಪೇರಿ ಸಂದರ್ಭದಲ್ಲಿ ತಾಲೂಕಿನ ಅರಣ್ಯ ಅಧಿಕಾರಿಗಳು ಏಕಾಎಕಿಯಾಗಿ ದ್ವಂಸಗೊಳಿಸಿರುವ ವರ್ತನೆ ಪದೇ ಪದಾಎ ಸ್ಥಳಕ್ಕೆ ನಡೆಯುತ್ತಿದೆ. ಇದು ಅಧಿಕಾರಿಗಳ ದುವರ್ತನೆಯನ್ನು ತೋರಿಸುತ್ತದೆ.
ಜೀವನೋಪಾಯಕ್ಕಾಗಿ ದಿ. ಶನಿಯಾರ ನಾಯ್ಕನ ಪತ್ನಿ ದುರ್ಗಮ್ಮ ಅನಾದಿಕಾಲದಿಂದಲೂ ಈ ಅಂಗಡಿಯನ್ನು ನಡೆಸಿಕೊಂಡು ಬಂದಿದ್ದರು. ಈ ವೇಳೆ ಅಂಗಡಿಯ ರಿಪೇರಿಗೆ ತಗಡಿನ ಶೀಟನ್ನು ಹಾಕಿರುವುದಕ್ಕೆ ಏಕಾಏಕಿ ಅದನ್ನು ತೆರವುಗೊಳಿಸಿ ಕಟ್ಟಡವನ್ನು ಧ್ವಂಸ ಗೊಳಿಸುವ ಸಂದರ್ಭದಲ್ಲಿ ಯಾವುದೇ ಕಾನೂನು ವಿಧಿ ವಿಧಾನ ಅನುಸರಿಸದೇ, ಕಾನೂನಿನ ನೀತಿ ನಿಯಮವನ್ನು ಪಾಲಿಸದೇ, ಅರಣ್ಯ ಸಿಬ್ಬಂದಿಗಳ ವರ್ತನೆ ಕುರಿತು ಜನಪ್ರತಿನಿಧಿಗಳು ಮೌನವಾಗಿರುವುದು ವಿಷಾದಕರ. ಅರಣ್ಯವಾಸಿಗಳ ಸಹನೆ ಪರೀಕ್ಷಿಸುವ ಪ್ರವೃತ್ತಿಗೆ ಅರಣ್ಯ ಇಲಾಖೆಯು ಮುಂದಾಗಬಾರದು. ಅರಣ್ಯ ಸಿಬ್ಬಂದಿಗಳ ಧಮನಕಾರಿ ಕೃತ್ಯಕ್ಕೆ ಹೋರಾಟದಿಂದಲೇ ಉತ್ತರಿಸಬೇಕಾದೀತು ಎಂದು ಅವರು ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದರು.
ಅರಣ್ಯ ಸಿಬ್ಬಂದಿಗಳಿಂದ ಅನ್ಯಾಯಕ್ಕೆ ಒಳಗಾಗಿರುವ ದುರ್ಗಮ್ಮಳಿಗೆ ಮುಂದಿನ 48 ಗಂಟೆಗಳಲ್ಲಿ ನ್ಯಾಯ ಒದಗಿಸಬೇಕು. ಇಲ್ಲದಿದ್ದಲ್ಲಿ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯದ ವಿರುದ್ಧ ಬೃಹತ್ ಹೋರಾಟ ಮೂಲಕ ಪ್ರತಿಭಟಿಸಲಾಗುವುದೆಂದು ಸ್ಥಳದಿಂದಲೇ ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಡಿಎಫ್‌ಓ ಹೊನ್ನಾವರ ವಲಯ ಗಣಪತಿ ಅವರಿಗೆ ಫೋನಿನಲ್ಲಿ ಮಾತನಾಡಿ ತಕ್ಷಣ ವಿಧವೆ ಮಹಿಳೆಗೆ ನ್ಯಾಯ ಕೊಡಬೇಕೆಂದು ಆಗ್ರಹಿಸಿದರು.
ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯಕ್ಕೆ ಒಳಗಾಗಿ, ಆಘಾತಕ್ಕೆ ಒಳಗಾಗಿರುವ ದುರ್ಗಮ್ಮ ಶನಿಯಾರ ನಾಯ್ಕ ಅವರನ್ನ ಹೋರಾಟಗಾರರ ವೇದಿಕೆಯು ಸಂತೈಸಿ ಬೆಂಬಲವನ್ನು ಸೂಚಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ : ಜಿಲ್ಲೆಯಲ್ಲಿ ಭಟ್ಕಳ ಪ್ರಥಮ.
ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅರಣ್ಯ ಅತಿಕ್ರಮಣದಾರರು ಹಿಂಸೆಗೆ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸಂಖ್ಯೆಯಲ್ಲಿ ಭಟ್ಕಳ ಪ್ರಥಮ ಸ್ಥಾನದಲ್ಲಿರುವುದು. ಇದ್ದವರಿಗೆ ಒಂದು ಇಲ್ಲದಿದ್ದವರಿಗೆ ಒಂದು ನೀತಿ ಅನುಸರಿಸುವ ಅರಣ್ಯ ಇಲಾಖೆಯ ನೀತಿ ಖೇದಕರ. ಅಲ್ಲದೇ, ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳ ವರ್ತನೆ ಅಮಾನವೀಯತೆಯಿಂದ ಕೂಡಿರುವುದು ದುಃಖಕರ ಸಂಗತಿಯೆಂದು ಜಿಲ್ಲಾ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಮಹಿಳೆಗೆ ಅರಣ್ಯ ಸಿಬ್ಬಂದಿಗಳಿಂದ ಬೆದರಿಕೆಯ ಪದ ತೀವ್ರ ಆಕ್ರೋಶ:
ಅರಣ್ಯ ಸಿಬ್ಬಂದಿಗಳು ವಿಧವೆ ಮಹಿಳೆ ದುರ್ಗಮ್ಮಳ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಅನಾಗರಿಕ ರೀತಿಯಲ್ಲಿ, ಮಾನವೀಯತೆಯನ್ನು ಮೀರಿ ವರ್ತಿಸುವ ಕ್ರಮ, ದೌರ್ಜನ್ಯದ ರೀತಿ, ಬೆದರಿಕೆಯ ಪದಗಳ ಕುರಿತು ಜಿಲ್ಲಾಧ್ಯಕ್ಷ ರವೀಂದ್ರ ನಾಯ್ಕ ಭೇಟಿಯ ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗಳ ವಿರುದ್ಧ ಸ್ಥಳೀಯರಾದ ಚಂದ್ರು ಮೋಗೆರ, ಮಹೇಶ ನಾಯ್ಕ, ಮನೋಹರ ನಾಯ್ಕ, ತರಬೇಜ ಮುಂತಾದವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ದೇವರಾಜ ಗೋಡ, ಕಯೀಂ ಸಾಬ, ಪಾಂಡುರಂಗ ನಾಯ್ಕ ಬೆಳಕೆ, ರಿಜವಾನ ಸಾಬ, ಹತ್ಸಾಪ ದಾಮುದ್ದೀನ್ ಮುಂತಾದವರು ಉಪಸ್ಥಿತರಿದ್ದರು.
Leave a Comment