ಸಿದ್ದಾಪುರ: 40 ಸಾವಿರ ಮೌಲ್ಯದ ಸಿಪ್ಪೆ ಅಡಿಕೆಯನ್ನು ಚೀಲ ಸಮೇತ ಕಳವು ಮಾಡಿದ್ದ ಮೂವರನ್ನು ಮಾಲು ಸಮೇತ ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಹಳಲಗೇರಿಯಲ್ಲಿ ದಿನೇಶ ಹೆಗಡೆ ಎನ್ನುವವರು ತಮ್ಮ ತೋಟದಲ್ಲಿ ಬೆಳೆದ ಸುಮಾರು 30 ಕೆಜಿ ತೂಕವುಳ್ಳ 7 ಅಡಿಕೆ ಚೀಲಗಳು ಕಳ್ಳತನವಾಗಿರುವ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ಪತ್ತೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಡಿ.ಪೆನ್ನೇಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಭದ್ರಿನಾಥ, ಡಿವೈಎಸ್‌ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ, ಪೊಲೀಸ್ ಇನ್‌ಸ್ಪೆಕ್ಟರ್ ಕುಮಾರ ಕೆ., ಪಿಎಸ್‌ಐಗಳಾದ ಮಹಾಂತಪ್ಪ ಕುಂಬಾರ, ಮಂಜೇಶ್ವರ ಚಂದಾವರ ಮತ್ತು ಪೊಲೀಸ್ ಸಿಬ್ಬಂದಿ ಗಂಗಾಧರ ಹೊಂಗಲ್, ರಮೇಶ ಕೂಡಲ್, ಕರಬಸಪ್ಪ ಇಂಗಳಸೂರ, ಮೋಹನ ಗಾವಡಿ ಸೇರಿ ಕಳ್ಳರ ಪತ್ತೆಗೆ ಮುಂದಾಗಿದ್ದರು.
ಪ್ರಕರಣ ಭೇದಿಸಿದ ಪೊಲೀಸರು, ಬೇಡ್ಕಣಿಯ ಅಡಿಕೆ ವ್ಯಾಪಾರಿಗಳಾದ ಜಾಫರ ಸಾಬ, ಫಾರೂಖ ಸಾಬ, ಇಂದಿರಾನಗರದ ಶಿರಸಿ ಹಜರತಅಲಿ ಬಳೆಗಾರರನ್ನು ಬಂಧಿಸಿ, ಅವರಿಂದ ಕಳ್ಳತನ ಮಾಡಿದ್ದ ಸಿಪ್ಪೆ ಸಮೇತ 7 ಚೀಲ ಅಡಿಕೆಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ್ದ ಮಾರುತಿ ಓಮ್ಮಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Leave a Comment