ಭಟ್ಕಳ: ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಹಣೆಪಟ್ಟಿ ಪಡೆದುಕೊಂಡಿದ್ದ ತಾಲೂಕಿನ ಬಂದರಿನ ಸಂಗಮ ಪ್ರದೇಶದಲ್ಲಿ ಗೋವಿನ ರುಂಡಗಳು ನೀರಿನಲ್ಲಿ ತೇಲಿ ಬಂದಿದ್ದು, ಕೆಲ ಕಾಲ ಜನರಲ್ಲಿ ಆತಂಕ ಮೂಡಿಸಿತ್ತು.
ಬಂದರ ಪ್ರದೇಶದಲ್ಲಿ ಮೀನುಗಾರರು ಗೋವಿನ ರುಂಡಗಳು ನೀರಿನಲ್ಲಿ ತೇಲಿ ಬರುತ್ತಿರುವುದನ್ನು ಗಮನಿಸಿ ಆತಂಕಕ್ಕೊಳಗಾದರು. ನಂತರ ಅನೇಕ ಚೀಲಗಳಲ್ಲಿ ತೇಲಿ ಬರುತ್ತಿರುವುದನ್ನು ನೋಡಿದ್ದು ತಕ್ಷಣ ಕೆಲವರು ರುಂಡವನ್ನು ಹಗ್ಗದಿಂದ ಕಟ್ಟಿ ಹಾಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗ್ರಾಮೀಣ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಗೋವಿನ ರುಂಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಕೆಲವು ರುಂಡಗಳು ಸಮುದ್ರಕ್ಕೆ ಸೇರಿದ್ದು, ಒಂದು ಮಾತ್ರ ದೊರೆತಿದೆ ಎನ್ನಲಾಗಿದೆ.
ರಾಜ್ಯದಲ್ಲಿ ಗೋಹತ್ಯೆ ನಿಷೇಧವಿದ್ದರೂ ಸಹ ಅಲ್ಲಲ್ಲಿ ಗೋವುಗಳನ್ನು ವಧೆ ಮಾಡಿರುವುದು ಸ್ಪಷ್ಟವಾಗಿದ್ದು ಬೆಳಿಗ್ಗೆ ಕಂಪೌಂಡ್ ಒಳಗಡೆ 20 ಕೆ.ಜಿ. ಮಾಂಸ ದೊರೆತರೆ, ನೀರಿನಲ್ಲಿ ತೇಲಿ ಬಂದ ಗೋವಿನ ರುಂಡಗಳು ಆತಂಕಕ್ಕೆ ಕಾರಣವಾಗಿದೆ. ಕಾನೂನನ್ನು ಉಲ್ಲಂಘನೆ ಮಾಡಿದವರನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.
Leave a Comment