ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಅನಗತ್ಯ ಅಪಪ್ರಚಾರ-ಸತೀಶ ನಾಯ್ಕ
ಹೊನ್ನಾವರ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ನೀಡಿದ ಗ್ಯಾರಂಟಿ ಭರವಸೆಯನ್ನು ಅನುಷ್ಠಾನಗೊಳಿಸುತ್ತಿರುವ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರದ ಜನಪರ ಕಲ್ಯಾಣ ಕಾರ್ಯಕ್ರಮವನ್ನು ಸಹಿಸದ ಭಾರತೀಯ ಜನತಾ ಪಕ್ಷದ ಮುಖಂಡರು ತಮ್ಮ ಘನತೆ, ಗೌರವವನ್ನು ಮರೆತು ಕಾಂಗ್ರೆಸ್ ಸರಕಾರದ ಮೇಲೆ ಇಲ್ಲಸಲ್ಲದ ಅಪಪ್ರಚಾರ ನಡೆಸುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ವೀಭಾಗದ ಅಧ್ಯಕ್ಷ ಸತೀಶ ನಾಯ್ಕ ಖೇದ ವ್ಯಕ್ತ ಪಡಿಸಿದರು. ಅವರು ರವಿವಾರ ಮುಂಜಾನೆ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ, ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗ ಏರ್ಪಡಿಸಿದ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರು ಮತ್ತು ಸಮಾಜದ ಶೋಷಿತ ವರ್ಗದ ಜನರೇ ಬೆನ್ನೆಲುಬಾಗಿದ್ದು, ಇಂತಹ ಅಸಹಾಯಕ ವರ್ಗಕ್ಕೆ ಕಾಂಗ್ರೆಸ್ ಪಕ್ಷ ಸಹಾಯಕ್ಕೆ ಮುಂದಾದರೇ, ವಿರೋಧ ಪಕ್ಷಗಳು ಅನಗತ್ಯ ಟೀಕೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ನೀಡಿದ ವಾಗ್ದಾನದಂತೆ, ಅಧಿಕಾರಕ್ಕೆ ಬಂದ ನೂರು ದಿನಗಳೊಳಗೆ ಎಲ್ಲಾ ಐದು ಗ್ಯಾರಂಟಿಗಳನ್ನು ನಾಡಿನ ಜನತೆಗೆ ಪೂರೈಸುತ್ತಿರುವದು ಕಾಂಗ್ರೆಸ್ ಕಾರ್ಯಕರ್ತರಿಗೆ ಹರ್ಷ ತಂದಿದೆ ಎಂದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್ ತೆಂಗೇರಿ ಮಾತನಾಡಿ ಕಾಂಗ್ರೆಸ್ ಪಕ್ಷ ಯಾವತ್ತೂ ಹಿಂದುಳಿದ ಮತ್ತು ಸಮಾಜದ ಎಲ್ಲಾ ದುರ್ಬಲ ವರ್ಗದ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಹಿಂದುಳಿದ ವರ್ಗದಲ್ಲಿಯೇ ನೂರಾರು ಸಣ್ಣಪುಟ್ಟ ಹಿಂದುಳಿದ ಸಮುದಾಯಗಳಿದ್ದು, ಅಂತಹ ಸಮುದಾಯಗಳನ್ನು ಗುರುತಿಸಿ ಮೇಲಕ್ಕೆತ್ತುತ್ತಿರುವ, ಸ್ವತಃ ಹಿಂದುಳಿದ ವರ್ಗದವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯ ಶ್ಲಾಘನೀಯವಾದದ್ದು ಎಂದರು. ವೀರಪ್ಪ ಮೊಯ್ಲಿ ಮತ್ತು ಧರ್ಮಸಿಂಗ್ರಂತಹ ಅತೀ ಚಿಕ್ಕ ಹಿಂದುಳಿದ ಸಮಾಜದ ನಾಯಕರು ಕೂಡ ಮುಖ್ಯಮಂತ್ರಿ ಸ್ಥಾನದಂತಹ ಉನ್ನತ ಅಧಿಕಾರ ಸ್ಥಾನಮಾನ ಪಡೆಯಲು ಸಾಧ್ಯವಾಗಿದ್ದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಎಂದು ಜಗದೀಪ್ ಎನ್. ತೆಂಗೇರಿ ಹೆಮ್ಮೆ ವ್ಯಕ್ತಪಡಿಸಿದರು.
ಕೆ.ಪಿ.ಸಿ.ಸಿ.ಸದಸ್ಯ ಎಂ.ಎನ್.ಸುಬ್ರಮಣ್ಯ ಮಾತನಾಡಿ ವಿರೋಧ ಪಕ್ಷಗಳು ಹಿಂದುಳಿದ ವರ್ಗಗಳ ಬಗ್ಗೆ ಬರೇ ಮೋಸಳೆ ಕಣ್ಣಿರು ಸುರಿಸುತ್ತಿದ್ದು, ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿಯೇ ತೋರುತ್ತಿಲ್ಲ ಎಂದು ಆಪಾದಿಸಿದರು. ಹಿಂದುಳಿದ ವರ್ಗದ ಪರವಾಗಿದ್ದ ಮಂಡಳ ವರದಿ ಮತ್ತು ಚನ್ನಪ್ಪ ರೆಡ್ಡಿ ವರದಿಯನ್ನು ಜಾರಿಗೊಳಿಸದಂತೆ ಜೆ.ಡಿ.ಎಸ್ ಮತ್ತು ಬಿ.ಜೆ.ಪಿ. ಪಕ್ಷಗಳು ರಾಷ್ಟøವ್ಯಾಪಿ ವರ್ಷಾನುಗಟ್ಟಲೇ ಪ್ರತಿಭಟನೆ ನಡೆಸಿದ್ದು ಇವರ ದ್ವಿಮುಖ ಧೋರಣೆಗೆ ಸಾಕ್ಷಿಯಾಗಿದ್ದು, ಕಾಂಗ್ರೆಸ್ ಪಕ್ಷದಿಂದ ಮಾತ್ರ ಹಿಂದುಳಿದ ವರ್ಗಗಳ ಏಳ್ಗೆ ಸಾಧ್ಯ ಎಂದರು.
ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಮಹೇಶ್ ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರಕಾರ ಮಹಿಳೆಯರಿಗಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಯಲ್ಲಿ ತಂದು, ನಾಡಿನ ಮಹಿಳೆಯರ ಶ್ರೇಯೋಭಿವೃದ್ಧಿಗೆ ಹಗಲು ರಾತ್ರಿ ಪರಿಶ್ರಮಿಸುತ್ತಿದೆ ಎಂದರು. ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ ಮತ್ತು ಅನ್ನಭಾಗ್ಯ ಯೋಜನೆಗಳ ಮೂಲಕ ರಾಜ್ಯದ ಮಹಿಳೆಯರ ಸೌಭಾಗ್ಯದ ಬಾಗಿಲು ತೆರೆದಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಶಿಕ್ಷಕರ ವಿಭಾಗದ ಅಧ್ಯಕ್ಷ ಡಾ||ಎಸ್.ಡಿ.ಹೆಗಡೆ ಮಾತನಾಡಿ ಕಾಂಗ್ರೆಸ್ ಸರಕಾರ ಜನರ ಸಂಕಷ್ಟಗಳನ್ನು ಪರಿಹರಿಸುತ್ತಾ, ಜನೋಪಯೋಗಿ ಯೋಜನೆಗಳನ್ನು ಜಾರಿಯಲ್ಲಿ ತರುತ್ತಿದ್ದರೇ, ಭಾರತೀಯ ಜನತಾ ಪಕ್ಷ ಜನರ ಭಾವನೆಗಳನ್ನು ಕೆರಳಿಸುತ್ತ, ಮುಗ್ಧ ಜನರಲ್ಲಿ ಕೋಮು ಭಾವನೆಗಳ ವಿಷಭೀಜ ಬಿತ್ತುತ್ತಿದೆ ಎಂದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್.ಗೌಡ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ ವಂದಿಸಿದರು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಮೋಹನ್ ಆಚಾರಿ, ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಸಾಮಾಜಿಕ ಜಾಲತಾಣದ ಅಧ್ಯಕ್ಷ ರಾಮಕ್ರಷ್ಣ ನಾಯ್ಕ, ಬಿಸಿಸಿ ಉಪಾಧ್ಯಕ್ಷ ದಾಮೋದರ ನಾಯ್ಕ,ಜಿಲ್ಲಾ ಹಿಂದುಳಿದ ವರ್ಗದ ಪದಾಧಿಕಾರಿಗಳಾದ ನಾಗರಾಜ್ ಮುರ್ಡೆಶ್ವರ, ಶ್ರೀಧರ ನಾಯ್ಕ, ಕೇಶವ ಶೆಟ್ಟಿ, ಜಿಲ್ಲಾ ಇಂಟೆಕ್ ಪ್ರಧಾನ ಕಾರ್ಯದರ್ಶಿ ಕೇಶವ ಮೇಸ್ತ, ಜಿಲ್ಲಾ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ, ಜಿಲ್ಲಾ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಪಾರೂಕ್ ಶೇಖ, ಮಾಜಿ ತಾಲೂಕು ಪಂಚಾಯತ್ ಸದಸ್ಯ ನಾರ್ಣಪ್ಪ ಗೌಡ ಪಕ್ಷದ ಪ್ರಮುಖ ಮುಖಂಡರಾದ ಶ್ರೀಕಾಂತ್ ಮೇಸ್ತ,ಹನೀಪ್ ಶೇಖ, ಉದಯ ಮೇಸ್ತ, ಮನ್ಸೂರ್ ಸೈಯದ್, ಮಂಜು ಮುಕ್ರಿ, ಮಂಜು ಖಾರ್ವಿ, ಮಹೇಶ್ ನಾಯ್ಕ, ಲಂಭೋದರ ನಾಯ್ಕ, ಕಿರಣ ಭಂಡಾರಿ, ಪ್ರವೀಣ ನಾಯ್ಕ, ಗಣೇಶ ಆಚಾರಿ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.
Leave a Comment