ಹೊನ್ನಾವರ: ಹೊನ್ನಾವರ ಕ್ಯಾಂಪ್ಕೋ ಸಂಸ್ಥೆಯ ಕಚೇರಿಯಲ್ಲಿ ನೂತನವಾಗಿ ಆರಂಭಿಸಲಾದ ಕಾಳುಮೆಣಸು ಖರೀದಿ ಕಾರ್ಯಕ್ರಮ ಶನಿವಾರ ಉದ್ಘಾಟನೆಗೊಂಡಿತು.
ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, `ರೈತರ ಬೇಡಿಕೆಯಂತೆ ಕುಮಟಾ ಮತ್ತು ಹೊನ್ನಾವರ ಕ್ಯಾಂಪ್ಕೋ ಸಂಸ್ಥೆಯಲ್ಲಿ ರೈತರಿಂದ ಅಡಕೆ ಜೊತೆಗೆ ಕಾಳುಮೆಣಸನ್ನು ಯೋಗ್ಯ ದರದಲ್ಲಿ ಖರೀದಿಸಲಾಗುವುದು. ಕಾಳುಮೆಣಸು ಖರೀದಿಸಲು ಕ್ಯಾಂಪ್ಕೋ ಸಂಸ್ಥೆ ಮುಂದಾಗಿದ್ದು, 21ನೇ ಶಾಖೆಗೆ ಪಾದಾರ್ಪಣೆ ಮಾಡಿದೆ. ಎರಡು ವರ್ಷಗಳಲ್ಲಿ ತಾಲೂಕಿನ ಎಲ್ಲಾ ಕಾಳುಮೆಣಸು ಬೆಳೆಗಾರರಿಂದ ಕಾಳುಮೆಣಸು ಖರೀದಿಸಿ ವಿದೇಶಕ್ಕೆ ರಪ್ತು ಮಾಡುವ ಗುರಿಯನ್ನು ಹೊಂದಲಾಗಿದೆ. ಕ್ಯಾಂಪ್ಕೋ ಸಂಸ್ಥೆಯಿಂದ ರೈತರಿಗಾಗಿ ವೈದ್ಯಕೀಯ ಸೌಲಭ್ಯವನ್ನು ಕಲ್ಪಿಸಲು ಧನ ಸಹಾಯ ಕಲ್ಪಿಸಲಾಗುವುದು. ರೈತರು ಏನೇ ಬೆಳೆ ಬೆಳೆದರೂ ತೂಕ ಹಾಗೂ ಗುಣಮಟ್ಟದ ಮೌಲ್ಯ ಆಧರಿಸಿ ನೇರವಾಗಿ ನಗದು ರೂಪದಲ್ಲಿ ಖರೀದಿಸಲಾಗುವುದು. ಪ್ರತಿದಿನ ರೈತರಿಂದ ನೇರವಾಗಿ ಕಾಳುಮೆಣಸು ಖರೀದಿಸಲಾಗುವುದು. ಇದರ ಸದುಪಯೋಗವನ್ನು ಕುಮಟಾ-ಹೊನ್ನಾವರ ರೈತ ಬಾಂಧವರು ಪಡೆದುಕೊಳ್ಳಬೇಕು ಎಂದರು.
ಸಂಸ್ಥೆಯ ವ್ಯವಸ್ಥಾಪಕರಾದ ಮುರಳೀಧರ, ಸುನಿಲ್ ಕುಮಾರ, ಶ್ರೀಕೃಷ್ಣ, ಅಡಿಕೆ ಬೆಳೆಗಾರ ಹರಿಯಪ್ಪ ನಾಯ್ಕ ಇತರರು ಉಪಸ್ಥಿತರಿದ್ದರು. ಮೊದಲ ದಿನದ ವ್ಯವಹಾರದಲ್ಲಿ ಪ್ರತಿ ಕೆ.ಜಿಗೆ 570 ರೂ. ನಂತೆ 50 ಕೆ.ಜಿ ಖರೀದಿಸಲಾಯಿತು. ಹೊನ್ನಾವರ ಮತ್ತು ಕುಮಟಾ ತಾಲೂಕಿನ ರೈತರು ತಾವು ಬೆಳೆದ ಕಾಳೆಣಸು ಮತ್ತಿತರ ಬೆಳೆಗಳನ್ನು ತಂದು ವ್ಯವಹಾರ ನಡೆಸಿದರು.
–gaju
Leave a Comment