ಹೊನ್ನಾವರ: ವಿಜ್ಞಾನ ಮತ್ತು ಆಧ್ಯಾತ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಹಿಂದಿನವರ ತ್ಯಾಗದ ಫಲವಾಗಿ ಇಂದಿನ ಮಕ್ಕಳು ಅಪಾರ ಅವಕಾಶಗಳು ಸಿಗುವಂತಾಗಿದೆ. ಅದನ್ನು ಸದುಪಯೋಗಪಡಿಸಿಕೊಂಡು ಸಾಧನೆ ಮಾಡಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಪಟ್ಟಣದ ಎಸ್.ಡಿ.ಎಂ ಕಾಲೇಜಿನ 8 ಲಕ್ಷ ರೂ. ವೆಚ್ಚದ ಸೌರ ವಿದ್ಯುತ್ ಉಪಕರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಸಾಧನೆ ಮಾಡಿ ದೇಶ ವಿದೇಶಗಳಲ್ಲಿ ಪ್ರಮುಖ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದಕ್ಕೆ ಸಾವಿರಾರು ಜನರ ಹೃದಯದ ಕೊಡುಗೆ ಇದೆ. ಹಿಂದೆ ಅವಕಾಶಗಳು ಕಡಿಮೆ ಇತ್ತು. ಕಿತ್ತು ತಿನ್ನುವ ಬಡತನದಿಂದ ಅನಿವಾರ್ಯವಾಗಿ ಉದ್ಯೋಗ ಅಲೆಸಿ ಪಟ್ಟಣಕ್ಕೆ ಸೇರುತ್ತಿದ್ದರು. ಇಂದು ವಿದ್ಯಾರ್ಥಿಗಳಿಗೆ ಅವಕಾಶಗಳು ಹೇರಳವಾಗಿದ್ದು, ಒಳ್ಳೆಯ ಕನಸನ್ನು ಕಂಡು ಸಾಧಿಸಿ ನನಸಾಗಿಸಲು ಸಾಧ್ಯವಿದೆ ಎಂದರು.
ಹಿಂದೆ ಕಾಲೇಜು ನಡೆಸಲು ಆರ್ಥಿಕ ತೊಂದರೆ ಉಂಟಾದಾಗ ಕಾಲೇಲಿನ ಅಧ್ಯಕ್ಷರಾದ ಡಾ.ಎಂ.ಪಿ.ಕರ್ಕಿ, ಆರ್.ಎನ್.ಕಾಮತ್ ಹಾಗೂ ಶಿಕ್ಷಣ ಪ್ರೇಮಿಗಳು ಬಂದು ಕಾಲೇಜು ನಡೆಸಲು ಸಹಾಯ ಕೋರಿದ್ದರು. ಅಂತೆಯೇ ಕಾಲೇಜಿನ 3 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಿ ನೀಡಿದ್ದೆವು. ಅಷ್ಟೇ ಅಲ್ಲ ಕಾಲೇಜಿಗೆ ಶ್ರೀ ಮಂಜುನಾಥೇಶ್ವರ ಹೆಸರನ್ನು ನೀಡಿದ್ದೆವು. ಸಾವಿರಾರು ಜನರ ತ್ಯಾಗದ ಫಲವಾಗಿ ಕಾಲೇಜು ನಾಡಿನ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿದೆ.
ವಿದ್ಯಾರ್ಥಿಗಳು ಏನು ಆಗಬೇಕು ಎನ್ನುವ ನಿರ್ಧಾರ ಮುಖ್ಯ. ಮಹಿಳೆಯರಿಗೂ ಸಮಾನ ಅವಕಾಶವಿದೆ. ಅವಕಾಶ ಬಳಸಿಕೊಳ್ಳುವುದು ನಿಮ್ಮ ಮುಂದಿದೆ. ಅಧ್ಯಯನ ಶೀಲರಾಗಬೇಕು. ಇಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ ವೃತ್ತಿ ವಿಕಸನಕ್ಕೆ ಅಪಾರ ಅವಕಾಶವಿದ್ದು ಬಳಸಿಕೊಳ್ಳುವ ಛಲ ಬೇಕು. ನಾವೆಲ್ಲರೂ ಭಾರತೀಯರು ಎಂದು ಬೆಳೆಯಬೇಕು. ನಮ್ಮ ದೇಶದ ಪ್ರತಿಭಾವಂತರು ವಿದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಅವರನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ವಿದೇಶದಲ್ಲಿ ಆರ್ಥಿಕ ಅಸಮತೋಲನ ಉಂಟಾಗಲಿದೆ.
ವಿಜ್ಞಾನ ಮತ್ತು ಆಧ್ಯಾತ್ಮ ಜೀವನಲ್ಲಿ ಒಟ್ಟಿಗೆ ಹೋಗಬೇಕು. ವಿದೇಶಿಗರು ಆಧ್ಯಾತ್ಮ ಜೀವನ ಒಪ್ಪುತ್ತಿದ್ದಾರೆ. ಪರೋಪಕಾರ ಮತ್ತು ಕಷ್ಟದಲ್ಲಿದ್ದವರಿಗೆ ಸ್ಪಂದಿಸುವುದೇ ಆಧ್ಯಾತ್ಮ. ವಿದ್ಯಾರ್ಥಿ ಜೀವನದಲ್ಲಿ ಆಧ್ಯಾತ್ಮ ಮರೆಯದೇ ಶುಭ ಚಿಂತನೆ ಇರಬೇಕು. ಭವಿಷ್ಯದ ಬಗ್ಗೆ ಗಮನ ಇರಲಿ. ಪರೋಪಕಾರದ ಜೊತೆಗೆ ತಂದೆ ತಾಯಿಯ ಸೇವೆ ಮಾಡಿ ಸಾಧನೆ ಮಾಡಿದರೆ ಶ್ರೇಷ್ಠ ಜೀವನ ನಡೆಸಲು ಸಾಧ್ಯ. ಬದುಕು ಶ್ರೀಗಂಧದ ಕಾಡು. ಸುಗಂಧ ನೀಡಿ ಬದುಕು ಹಸನಾಗಿಸಿಕೊಳ್ಳಿ ಎಂದರು.
ಎಂ.ಪಿ.ಇ ಸೊಸೈಟಿಯ ಅಧ್ಯಕ್ಷ ಡಾ.ಎಂ.ಪಿ ಕರ್ಕಿ ಮಾತನಾಡಿ ಡಾ.ವೀರೇಂದ್ರ ಹೆಗ್ಗಡೆಯವರು ಹಿಂದೆ ಈ ಕಾಲೇಜು ನಡೆಸಲು ಆರ್ಥಿಕ ಮುಗ್ಗಟ್ಟು ಉಂಟಾದಾಗ ಕೈ ಹಿಡಿದು ನಡೆಸಿದ ಫಲವಾಗಿ ಇಂದು ಅಭಿವೃದ್ಧಿ ಹೊಂದಲು ಸಾಧ್ಯವಾಯಿತು. ಸಾವಿರಾರು ಜನರ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ ಶ್ರೇಯಸ್ಸು ಹೆಗ್ಗಡೆಯವರಿಗೆ ಸಲ್ಲುತ್ತದೆ ಎಂದರು.
ಕಾರ್ಯದರ್ಶಿ ಪಿ.ಐ.ಹೆಗಡೆ, ಪ್ರಾಚಾರ್ಯರಾದ ಎಸ್.ಎಸ್.ಹೆಗಡೆ, ಎಂ.ಎಚ್.ಭಟ್ ಉಪಸ್ಥಿತರಿದ್ದರು. ಪ್ರೊ.ನಾಗರಾಜ ಹೆಗಡೆ ಅಪಗಾಲ, ಪ್ರಶಾಂತ ಮೂಡಲಮನೆ ನಿರೂಪಿಸಿದರು.
-gaju
Leave a Comment