ಹೊನ್ನಾವರ:
`ಬದಲಾದ ಸಮಯ ಹಾಗೂ ಪರಿಸ್ಥಿತಿಗೆ ಅನುಗುಣವಾಗಿ ಸಾಹಿತ್ಯ ಪ್ರಕಾರಗಳಲ್ಲೂ ಮಹತ್ತರ ಬದಲಾವಣೆ ಸಂಭವಿಸಿದೆ’ ಎಂದು ಹೈದರಾಬಾದಿನ ಕೇಂದ್ರ ಹಿಂದಿ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಅನಿತಾ ಗಂಗೋಲಿ ಅಭಿಪ್ರಾಯಪಟ್ಟರು.
ಪಟ್ಟಣದ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ಆಯೋಜಿಸಲಾದ ಯುಜಿಸಿ ಪ್ರಾಯೋಜಕತ್ವದಲ್ಲಿ ಆರಂಭವಾದ `ಹಿಂದಿ ಸಾಹಿತ್ಯಕಾ ವರ್ತಮಾನ ಸ್ವರೂಪ’ ಎನ್ನುವ ವಿಷಯದ ಕುರಿತ 3 ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬದಲಾದ ಕಾಲಘಟ್ಟದಲ್ಲಿ ಸಣ್ಣಕತೆಗಳು ಹೆಚ್ಚು ಪ್ರಚಲಿತವಾಗಿವೆ. ಓದುಗರಿಗೆ ಸಮಯದ ಅಭಾವವಿದೆ. ಪತ್ರಿಕೆಗಳಲ್ಲಿ ಉದ್ದುದ್ದ ಕಥೆಗಳನ್ನು ಪ್ರಕಟಿಸಲು ಜಾಗವಿಲ್ಲ. ಈ ಎಲ್ಲ ಕಾರಣಗಳಿಗಾಗಿ ಬರವಣಿಗೆಯಲ್ಲೂ ಬದಲಾವಣೆ ಕಂಡು ಬರುತ್ತಿದೆ. ಬರವಣಿಗೆ ಸಶಕ್ತವಾಗಲು ಸಾಹಿತಿಯಲ್ಲಿ ಲೋಕಾನುಭವದ ಅಗತ್ಯವಿದ್ದು ಇಂದಿನ ಕೃತಿಗಳಲ್ಲಿ ಅದರ ಕೊರತೆ ಎದ್ದು ಕಾಣುತ್ತಿದೆ ಎಂದರು.
ವಿಚಾರ ಸಂಕಿರಣ ಉದ್ಘಾಟಿಸಿದ ಹಿರಿಯ ಪತ್ರಕರ್ತ ಜಿ.ಯು.ಭಟ್ ಮಾತನಾಡಿ, `ಸಾಹಿತ್ಯದ ಕೃತಿಗಳ ಪ್ರಕಟಣೆ ಹೆಚ್ಚುತ್ತಿದೆಯಾದರೂ ಇದರ ಪರಿಣಾಮ ಒಟ್ಟಾರೆ ಸಮಾಜ ಹಾಗೂ ಜನಜೀವನದ ಮೇಲೆ ಎಷ್ಟು ಎನ್ನುವುದನ್ನು ಪರಾಮರ್ಶಿಸಬೇಕಿದೆ. ಭಾರತ ದೇಶದಲ್ಲಿ ಅನೇಕ ವೈರುದ್ಧ್ಯಗಳು ಕಂಡುಬರುತ್ತಿದ್ದು ಗೋವಿನ ಪೂಜೆ ಒಂದು ಕಡೆ ನಡೆಯುತ್ತಿದ್ದರೆ ಗೋವನ್ನು ಹಿಂಸಿಸುವ ಜಲ್ಲಿಕಟ್ಟಿನಂತ ಸಂವಿಧಾನ ವಿರೋಧಿ ಧಾರ್ಮಿಕ ಆಚರಣೆಗಳಿಗೆ ಒತ್ತಾಯ ಇನ್ನೊಂದೆಡೆ ಕೇಳಿ ಬರುತ್ತಿದೆ’ ಎಂದರು.
ಪ್ರಾಧ್ಯಾಪಕರಾದ ಪ್ರೊ. ಸಂಜಯ ಶ್ರೀವಾಸ್ತವ ಮೈಸೂರು, ಡಾ. ಪ್ರಭಾ ಭಟ್ಟ ಧಾರವಾಡ, ಪ್ರಾಚಾರ್ಯ ಪ್ರೊ. ಎಸ್.ಎಸ್.ಹೆಗಡೆ ಮಾತನಾಡಿದರು.
ಡಾ. ಸುವರ್ಣಾ ಗಾಡ್ ಸ್ವಾಗತಿಸಿದರು. ಪ್ರೊ. ಐ.ಎ.ಶೇಖ್ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಮುಬಿನಾ ಶೇಖ್, ಸಂತೋಷ ಗುಡಿಗಾರ ನಿರೂಪಿಸಿದರು.
-gaju
Leave a Comment