ಹೊನ್ನಾವರ:
ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಹಾಗೂ ರೈತ ಸಮುದಾಯದ ಸಂಕಷ್ಟಗಳಿಗೆ ಸ್ಪಂದಿಸದ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ತಾಲೂಕು ಬಿಜೆಪಿ ಮಂಡಲದ ಪ್ರಮುಖರು ಗುರುವಾರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
`ತಾಲೂಕಿನಲ್ಲಿ ಸತತ ಬರಬರಗಾಲದಿಂದ ರೈತರು, ಕೃಷಿಕಾರ್ಮಿಕರು ಕಂಗೆಟ್ಟಿದ್ದು ಆರ್ಥಿಕವಾಗಿ ಅತ್ಯಂತ ದುಸ್ಥಿತಿಯಲ್ಲಿದ್ದಾರೆ. ರೈತರು ಸಹಕಾರಿ ಸಂಘಗಳಲ್ಲಿ ಮಾಡಿದ ಸಾಲವನ್ನು ತುಂಬಲು ಸಾಧ್ಯವಾಗದೇ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಮುಂಗಾರು ಮತ್ತು ಹಿಂಗಾರು ಮಳೆಗಳು ರೈತರಿಗೆ ಕೈಕೊಟ್ಟಿದ್ದು, ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಅತರ್ಜಲ ಕುಸಿದಿದ್ದು ಬಾವಿ, ಕೆರೆ, ಹೊಳೆ ಹಾಗೂ ಕೊಳವೆಬಾವಿಗಳಲ್ಲಿ ನೀರಿಲ್ಲ. ಕೃಷಿ ಚಟುವಟಿಕೆ, ಜನ-ಜಾನುವಾರು ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರಿಲ್ಲದೆ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ರೈತರು ದಿನನಿತ್ಯ ಜೀವನ ಸಾಗಿಸುವುದು ಕಷ್ಟಕರವಾಗಿದ್ದು ಕೂಡಲೇ ಕೇಷಿಕರ ಎಲ್ಲಾ ಸಾಲವನ್ನು ಮನ್ನಾಮಡಿ ರೈತರ ಬವಣೆಯನ್ನು ನೀಗಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಉಗ್ರ ಹೋರಾಟ: ರೈತರ ಸಾಲ ಮನ್ನಾ, ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಒದಗಿಸಬೇಕು. ಜನರ ಕಷ್ಟಗಳಿಗೆ ಕೂಡಲೇ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ಸರ್ಕಾರವನ್ನು ಎಚ್ಚರಿಸಿದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಜಿ.ನಾಯ್ಕ, ಬಿಜೆಪಿ ತಾಲೂಕು ಅಧ್ಯಕ್ಷ ಸುಬ್ರಾಯ ನಾಯ್ಕ, ಬಿಜೆಪಿ ಮುಖಂಡ ವೆಂಕಟ್ರಮಣ ಹೆಗಡೆ ಕವಲಕ್ಕಿ, ರಾಜ್ಯ ಸಮಿತಿ ಸದಸ್ಯ ಉಮೇಶ ನಾಯ್ಕ, ತಾಲೂಕು ಕಾರ್ಯದರ್ಶಿ ರಾಜು ಭಂಡಾರಿ, ಮುಖಂಡರುಗಳಾದ ಉಲ್ಲಾಸ ಶ್ಯಾನಭಾಗ, ನಾರಾಯಣ ಎಂ. ಹೆಗಡೆ, ಗಣಪತಿ ಗೌಡ, ವಿನಾಯಕ ಆಚಾರಿ, ಸರೇಶ ಹರಿಕಾಂತ, ದತ್ತಾತ್ರಯ ಮೇಸ್ತ, ಮಂಜು ನಾಯ್ಕ ಗೇರುಸೊಪ್ಪಾ, ಸುರೇಶ ಖಾರ್ವಿ, ಲೋಕೇಶ ಮೇಸ್ತ ಇತರರು ಪಾಲ್ಗೊಂಡಿದ್ದರು. ತಹಸೀಲ್ದಾರ್ ವಿ.ಆರ್.ಗೌಡ ಮನವಿ ಸ್ವೀಕರಿಸಿದರು.
-gaju
Leave a Comment