ಹೊನ್ನಾವರ:
ತಾ.ಪಂ ಸಾಮಾನ್ಯ ಸಭೆ ತಾ.ಪಂ ಸಭಾಭವನದಲ್ಲಿ ಅಧ್ಯಕ್ಷ ಅಣ್ಣಯ್ಯ ನಾಯ್ಕ ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ ಎರಡು ಸಾಮಾನ್ಯ ಸಭೆಯಲ್ಲಿ ಹಾಜರಾಗದ ಇಲಾಖಾ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ತಾ.ಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ ತಾ.ಪಂ ಕಾರ್ಯನಿರ್ವಹಣಾಧಿಕಾರಿಗಳಿಗೆ ಕೇಳಿದರು.
ಇಓ ಡಾ.ಮಹೇಶ ಕುರಿಯವರ್ ಮಾತನಾಡಿ ಹಾಜರಾಗದ ಅಧಿಕಾರಿಗಳಿಗೆ ಸಭೆಯ ಠರಾವನ್ನು ಕಳುಹಿಸಲಾಗಿದೆ. ಆದರೂ ಕೆಲವು ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಲಿಲ್ಲ. ಅಂತಹ ಅಧಿಕಾರಿಗಳಿಂದ ಜನಪ್ರತಿನಿಧಿಗಳು ಸಾರ್ವಜನಿಕರಿಂದ ಸಮಸ್ಯೆಗಳು ಪರಿಹರಿಸಲು ನಿಮ್ಮಿಂದಾಗದು ಎಂದು ಆಡಿಕೊಳ್ಳುತ್ತಿದ್ದಾರೆ. ಲೇಂಡ್ ಆರ್ಮಿ, ಚಿಕ್ಕ ನೀರಾವರಿ ಇಲಾಖೆಯ ಅಧಿಖಾರಿಗಳು ಸತತವಾಗಿ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಈ ಅಧಿಕಾರಿಗಳ ಬಗ್ಗೆ ಕ್ರಮ ಕೈಗೊಳ್ಳಲು ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು. ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ಬಗ್ಗೆ ವರದಿ ಸಲ್ಲಿಸಲು ಎಲ್ಲಾ ಸದಸ್ಯರು ಆಗ್ರಹಿಸಿದರು.
ಕೃಷಿ ಇಲಾಖೆ: ಇಲಾಖೆಯಿಂದ ಅರ್ಹ ರೈತರಿಗೆ ನೀಡುವ ಟಾರ್ಫಲ್ನ್ನು ವಿತರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.
ಉಲ್ಲಾಸ ನಾಯ್ಕ ಮಾತನಾಡಿ ನಗರೆ ಪ್ರದೇಶದಲ್ಲಿ 50 ಎಕರೆ ಭತ್ತದ ಗದ್ದೆ ನೀರಿನ ಕೊರತೆಯಿಂದ ಕಟಾವು ಮಾಡಲಾಗದ ಸ್ಥಿತಿಯಲ್ಲಿ ಇದೆ. ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದೀರಾ ಎಂದು ಪ್ರಶ್ನಿಸಿದರು.
ಕೃಷಿ ಇಲಾಖೆಯ ಅಧಿಕಾರಿ ಮಾತನಾಡಿ ಏತ ನೀರಾವರಿ ಸರಬರಾಜು ವಿಚಾರ ಚಿಕ್ಕ ನೀರಾವರಿ ಇಲಾಖೆಗೆ ಸಂಬಂಧಿಸಿದ್ದಾಗಿದೆ ಎಂದರು.
ಸದಸ್ಯ ಗಣಪಯ್ಯ ಗೌಡ ಮಾತನಾಡಿ ಏತ ನೀರಾವರಿ ಇಲಾಖೆಯ ಅಧಿಕಾರಿಗಳು ಕಳೆದ ಮೂರು ವರ್ಷಗಳಿಂದ ಪತ್ರ ಬರೆದರೂ ಬಂದು ಪರಿಶೀಲಿಸುತ್ತಿಲ್ಲ. ಹೀಗಾದರೆ ಜನಪ್ರತಿನಿಧಿಗಳು ಸಾರ್ವಜನಿಕರಿಂದ ಪೆಟ್ಟುತಿನ್ನಬೇಕಾಗುತ್ತದೆ. ಠರಾವು ಕಳುಹಿಸಿದರೂ ಸಭೆಗೆ ಹಾಜರಾಗದಿದ್ದರೆ ಹೇಗೆ. ಸಭೆಗೆ ಹಾಜರಾಗದ ಅಧಿಕರಿಗಳಿಗೆ ಕ್ರಮ ಕೈಗೊಳ್ಳಿ ಎಂದು ಸಭೆಗೆ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್.ಭಟ್ ಮಾತನಾಡಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ 2 ಪರೀಕ್ಷೆ ನಡೆಯಲಿದೆ. ಈ ಸಾಲಿನಲ್ಲಿ ತಾಲೂಕಿನ 36 ಪ್ರೌಢಶಾಲೆಯ 10ನೇ ತರಗತಿಯ 2058 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು. ಅವರು ಹೆಚ್ಚಿನ ಅಂಕದೊಂದಿಗೆ ತೇರ್ಗಡೆಯಾಗಲಿ ಎಂದು ತಾ.ಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ ಶುಭ ಕೋರಿದರು. ತಾ.ಪಂ ಸದಸ್ಯರು ಪ್ರತೀ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಲು ಸೂಚಿಸಿದರು.
ಅಕ್ಷರ ದಾಸೋಹ: ತಾಲೂಕಿನಲ್ಲಿ 299 ಫಲಾನುಭವಿಗಳಿಗೆ ಯೋಜನೆಯನ್ನು ಅನಿಷ್ಠಾನಗೊಳಿಸಲಾಗಿದೆ. ವೇತನದ ಅನುದಾನ ಬರಬೇಕಾಗಿದೆ. ಸಹಾಯಕರ ಹುದ್ದೆ ಖಾಲಿಯಿದೆ ಎಂದರು.
ಆರೋಗ್ಯ ಇಲಾಖೆ: ತಾಲೂಕಿನ ಆಡುಕಳ, ಮುಟ್ಟಾ ಹಾಗೂ ಖರ್ವಾ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, 3 ಪ್ರಕರಣಗಳು ಪತ್ತೆಯಾಗಿದೆ. ತಾಲೂಕಿನ 8000 ಮಕ್ಕಳಿಗೆ ದಡಾರ ಮತ್ತು ರುಬೆಲಾ ಚುಚ್ಚುಮದ್ದು ನೀಡಬೇಕಾಗಿತ್ತು. ಆದರೆ ಕೇವಲ 400 ಚುಚ್ಚುಮದ್ದು ನೀಡಲಾಗಿದೆ. ಬಾಕಿಯಿರುವ ಮಕ್ಕಳಿಗೆ ಚುಚ್ಚುಮದ್ದು ನೀಡಲು ಅಸಹಕಾರ ತೋರುತ್ತಿದ್ದಾರೆ. ವಾಟ್ಸ್ಪ್ ಜಾಲತಾಣದಲ್ಲಿ ಬಂದಿರುವ ಸುಳ್ಳು ಮಾಹಿತಿಯನ್ನಾಧರಿಸಿ ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳಿಗೆ ಚುಚ್ಚುಮದ್ದು ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸರಿಯಾದ ಮನವರಿಕೆ ಮಾಡಲು ತಾ.ಪಂ ನ್ಯಾಯ ಸಮಿತಿ ಅಧ್ಯಕ್ಷ ಖಾಜಿ ಮಹ್ಮದ್ ಶಾದ್ ಅವರಿಗೆ ತಿಳಿಸಿದರು.
ಖಾಜಿ ಮಹ್ಮದ್ ಶಾದ್ ಮಾತನಾಡಿ ಈಗಾಗಲೇ ಪಾಲಕರಲ್ಲಿ ಮಕ್ಕಳಿಗೆ ಚುಚ್ಚುಮದ್ದು ಪಡೆಯುವಂತೆ ತಿಳಿಸಲಾಗಿದೆ ಎಂದರು.
ಸಾರಿಗೆ: ತಾ.ಪಂ ಅಧ್ಯಕ್ಷ ಅಣ್ಣಯ್ಯ ನಾಯ್ಕ ಮಾತನಾಡಿ ಮಂಕಿ ಒಳಗೆ ಬಸ್ ಬಿಡಲು ಕಳೆದ ಸಭೆಯಲ್ಲಿ ತಿಳಿಸಲಾಗಿತ್ತು. ಈವರೆಗೂ ಏಕೆ ಬಸ್ ಬಿಡುತ್ತಿಲ್ಲ ಎಂದು ಸಾರಿಗೆ ಅಧಿಕಾರಿಯನ್ನು ಪ್ರಶ್ನಿಸಿದರು.
ಅಧಿಕಾರಿ ಮಾತನಾಡಿ ಮಂಕಿ ಒಳಭಾಗದ ರಸ್ತೆ ಅತ್ಯಂತ ಕಿರಿದಾಗಿದ್ದು ರಸ್ತೆ ಸಮರ್ಪಕವಾಗಿಲ್ಲ. ಎದುರಿನಿಂದ ಬೇರೆ ವಾಹನ ಬಂದರೆ ತೊಂದರೆ ಉಂಟಾಗುತ್ತದೆ ಎಂದು ತಿಳಿಸಿದರು.
ಸಭೆ ಮುಗಿದ ನಂತರ ಸ್ಥಳಕ್ಕೆ ಬಸ್ ಸಮೇತ ಭೇಟಿ ನೀಡಿ ಪರಿಶೀಲಿಸುವುದಾಗಿ ಅಣ್ಣಯ್ಯ ನಾಯ್ಕ ತಿಳಿಸಿದರು.
ಹೆಸ್ಕಾಂ ಇಲಾಖೆ: ಸದಸ್ಯ ತುಕಾರಾಮ ನಾಯ್ಕ ಮಾತನಾಡಿ ತಾಲೂಕಿನ ಹಡಿನಬಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಅನೇಕ ವರ್ಷಗಳಿಂದ ಹೆಸ್ಕಾಂ ಇಲಾಖೆಯ ಲೈನ್ಮೆನ್ ಆಗಿ ಕಾರ್ಯನಿರ್ವಹಿಸುತ್ತಿರುವ ಗಜಾನನ ವಿಷ್ಣು ನಾಯ್ಕ ಈತ ಹಾಡಗೇರಿಯಲ್ಲಿ ಕೆಲ ದಿನಗಳ ಹಿಂದೆ ವಿದ್ಯುತ್ ರಿಪೇರಿಯ ನೆಪದಲ್ಲಿ ಹೋಗಿ ಮಹಿಳೆಗೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಯನ್ನು ಪ್ರಶ್ನಿಸಿದರು. ನಿಮ್ಮ ಇಲಾಖೆಯಿಂದ ಒಂದೊಂದು ಸಭೆಗೆ ಒಬ್ಬೊಬ್ಬರು ಅಧಿಕಾರಿಗಳು ಬರುತ್ತೀರಿ. ಭಾರತೀ ಸಂಸ್ಕøತಿಯಲ್ಲಿ ಮಹಿಳೆಗೆ ಮಹತ್ವದ ಸ್ಥಾನಮಾನವಿದೆ. ಮಹಿಳೆಯ ಮೇಲಿನ ಈ ರೀತಿಯ ದೌರ್ಜನ್ಯಕ್ಕೆ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಲೈನ್ಮೆನ್ ಮೇಲೆ ಶಿಸ್ತಿನ ಕ್ರಮ ಕೈಗೊಂಡು ಬೇರೆಡೆ ವರ್ಗಾಯಿಸಲು ಠರಾಯಿಸಲಾಯಿತು.
ಕಸ್ತೂರಿ ರಂಗನ್ ವರಿದಿಯಿಂದ ಪರಿಸರ ಸೂಕ್ಷ್ಮ ಗ್ರಾಮವೆಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ ಯಾವುದೇ ಅಭಿವೃದ್ಧಿಕಾರ್ಯ ನಡೆಸಲು ಸಾಧ್ಯವಾಗುವುದಿಲ್ಲ. ಇದನ್ನು ಕೂಡಲೇ ಕೈಬಿಡಬೇಕು ಎಂದು ಸಭೆಗೆ ಪ್ರಸ್ತಾಪಿಸಿದರು. ಇದಕ್ಕೆ ಸರ್ವಾನುಮತದಿಂದ ಎಲ್ಲಾ ಸದಸ್ಯರು ಖಂಡನಾ ನಿರ್ಣಯ ಕೈಗೊಂಡರು.
-gaju
Leave a Comment