ಗೋಕರ್ಣ :
ಶ್ರೀ ಕ್ಷೇತ್ರ ಗೋಕರ್ಣ ಹಬ್ಬ ಉತ್ಸವಗಳ ಆಗರದ ತವರಾಗಿದೆ. ವರುಷ ಪೂರ್ತಿ ಧಾರ್ಮಿಕ ಉತ್ಸವಗಳನ್ನು ಕಾಣುವ ಏಕೈಕ ಕ್ಷೇತ್ರ ಗೋಕರ್ಣವಾಗಿದೆ. ನಾಡಿನ ಹೆಮ್ಮೆಯ ಬಣ್ಣದೋಕುಳಿಯಾಟದ ಹೋಳಿ ಹಲವು ಜಾಗರಣದ ಮಜಲುಗಳು ನೂತನ ವರುಷದ ಆರಂಬದ ಹುಣ್ಣಿಮೆಯಂದು ವೈಭವವಾಗಿ ಆಚರಿಸಿ ವಿಜೃಂಬಿಸಲಿದೆ. ಮುಂದಿನ ಹುಣ್ಣಿಮೆ ಗೋಕರ್ಣದಲ್ಲಿ ಸುಗ್ಗಿ ಹಾಗು ಹೋಳಿ ಹುಣ್ಣಿಮೆಯಾಗಿದೆ. ಇದಕ್ಕೆ ಕಾರಣ ಅನೇಕವಿದ್ದರೂ ಗೋಕರ್ಣ ಕ್ಷೇತ್ರ ಪುರಾಣದಲ್ಲಿರುವಂತೆ “ ಕಾಮಜಯಂತಿಯ ಮುನ್ನಾ ದಿನ, ಶಿವ ಗೋಕರ್ಣ ಸಮೀಪದ ನದಿ ತೀರಕ್ಕೆ ತೆರಳುತ್ತಾನೆ. ಅಘನಾಶಿನಿ ನದಿ ಹಾಗು ಸಮುದ್ರ ಸಂಗಮ ಸ್ಥಳದಲ್ಲಿ ಗೋಕರ್ಣ ಆತ್ಮಲಿಂಗ ಸ್ವರೂಪಿ ಶಿವ ಸ್ನಾನಗೈದು ಪರಿಶುದ್ದನಾಗುತ್ತಾನೆ. ಇಲ್ಲಿ ಅಘ ಎಂದರೆ ಧರ್ಮಕ್ಕೆ ವಿರುದ್ದವಾದ ಆಚರಣೆ ಹಾಗು ಪಾಪಗಳು ನಾಶಿನಿ ಎಂದರೆ ಪಾಪದ ಹಾಗು ಅಧರ್ಮದ ಆರದ ತೇಪೆಯನ್ನು ಪೂರ್ಣವಾಗಿ ತೊಡೆದು ಹಾಕುವ ಪರಿ ಎಂದಿದೆ. ಪರಿಶುದ್ದತೆಯನ್ನು ಆವಿರ್ಬರಿಸುವವಳೇ ಅಘನಾಶಿನಿ ಸಮುದ್ರ ಪಾಪಪುಣ್ಯಗಳ ಸಮತಾಭಾವವನ್ನು ಸ್ವೀಕರಿಸುವ ಕೇಂದ್ರ ಬಿಂದು ಈ ಸಂಗಮ ಸ್ಥಳದಲ್ಲಿ ಶಿವನೂ ಕಳೆದ ಒಂದು ವರುಷಗಳಿಂದ ತನ್ನ ತಮ್ಮ ಪರಿವಾರಗಳಿಂದ ಜ್ನಾತಾ ಅಜ್ನಾತಾ( ತಿಳಿದೋತಿಳಿಯದೆಯೋ) ಘಟಿಸಿದ ಅನೀತಿಗಳನ್ನು ಹೋಗಲಾಡಿಸಿಕೊಳ್ಳಲು ನದಿಸಂಗಮಸ್ಥಳದಲ್ಲಿ ಸ್ನಾನಗೈದು ಮತ್ತೆ ಭೂಮಂಡಲವನ್ನು ಸಮೃದ್ದಿಗೊಳಿಸಲು ಸಿದ್ದನಾಗುತ್ತಾನೆ” ಎಂಬ ಕಥಾಮೃತದ ಶಿವ ಪುರಾಣದೊಂದಿಗೆ ತನ್ನ ಪೂಜಿಪ ಭಕ್ತರ ಕ್ಷೇತ್ರದಲ್ಲಿ ಹೋಳಿ ಆಚರಿಸುವ ಪರಿಪಾಠವನ್ನು ಶತ ಶತಮಾನಗಳ ಪರಂಪರೆಯಲ್ಲಿ ಬೆಳೆಸಿದ್ದಾನೆ.
ಕಲಿಯುಗಾಬ್ದ 5119 ರ ಹೇಮಲಂಬಿ ಸಂವತ್ಸರದ ಯುಗಾದಿ ನಂತರದ ಹುಣ್ಣಿಮೆ ಶ್ರೀ ಕ್ಷೇತ್ರ ಗೋಕರ್ಣದ ಶಿವ ಸನ್ನಿದಾನದಲ್ಲಿ ಹಾಗು ಶ್ರೀ ಕ್ಷೇತ್ರದ 128 ದೇವಾಲಯಗಳ ಸಮ್ಮುಖದಲ್ಲಿ ಓಕಳಿಯಾಟದ ಹೋಳಿ ಸುಗ್ಗಿ ಹಬ್ಬದ ಮೂರುದಿನಗಳ ಹಬ್ಬವಾಗಿ ಇಲ್ಲಿನ ಹಾಲಕ್ಕಿ ಹಾಗು ಬೆಳೆಬೆಳೆಯುವ ರೈತರ ಮೋಜಿನ ಹಬ್ಬವಾಗಿ ಹೋಳಿಹಬ್ಬ ಆಚರಿಸುವ ವಾಡಿಕೆ ಜನಪದ ಸಂಪ್ರದಾಯವಾಗಿ ಬೆಳೆದು ಬಂದಿದೆ. ನೂತನ ವರುಷದ ಪ್ರಾರಂಬದಲ್ಲಿ ಹಬ್ಬೋತ್ಸವವಾಗಿ ಗೋಕರ್ಣ ಕ್ಷೇತ್ರದ ಹೋಳಿಯ ನಂತರ ನಾಡಿನ ಅನೇಕ ಭಾಗದಲ್ಲಿ ಹೋಳಿ ಹಬ್ಬ ಆಚರಿಸಲ್ಪಡುತ್ತದೆ. ಈಗ ನಾವು ಕಾಣುವ ಹೋಳಿ ವರುಷದ ಕೊನೆಯ ಹೋಳಿಯಾಗಿದೆ.
✍? *ಪುಷ್ಪಹಾಸ ಬಸ್ತಿಕರ
Leave a Comment