ಹೊನ್ನಾವರ:
ಸಾಲಕೋಡ ಗ್ರಾ.ಪಂ ವ್ಯಾಪ್ತಿಯ ಕೆರೆಕೋಣ ವಾರ್ಡ್ನಲ್ಲಿ 37 ಸಾವಿರ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಇದು ಕೇವಲ 2 ಮನೆಗಳಿಗೆ ಮಾತ್ರ ನಿರ್ಮಾಣಮಾಡಲಾಗಿದೆ ಎಂದು ಸಾಲಕೋಡ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆರೋಪ ವ್ಯಕ್ತಪಡಿಸಿದರು.
ಸಾಲಕೋಡ ಗ್ರಾ.ಪಂ ಸಭಾಭವನದಲ್ಲಿ ಗ್ರಾ.ಪಂ ಅಧ್ಯಕ್ಷೆ ಶಾಂತಿ ನಾಯ್ಕ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಿತು. ಗ್ರಾಮದಲ್ಲಿ ನೀರಿನ ಮೂಲ ಇಲ್ಲದೆ ತೆರವೆ ಬಾವಿಗಳೆಲ್ಲವೂ ಬತ್ತಿ ಹೊಗಿದೆ. ವರ್ಷಗಳು ಕಳೆದಂತೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅನೇಕ ಜನವಸತಿ ಪ್ರದೇಶಗಳಿಗೆ ನೀರಿನ ಅವಶ್ಯಕತೆ ಇದೆ. ಜನ-ಜಾನುವಾರುಗಳಿಗೆ ನೀರು ಪೂರೈಕೆ ಮಾಡಬೇಕಾದ ಗ್ರಾ.ಪಂ ಎರಡು ಕುಟುಂಬಗಳಿಗಾಗಿ ಮಾತ್ರ ನೀರಿನ ಸೌಲಭ್ಯ ಕಲ್ಪಿಸಿ ಉಳಿದವರಿಗೆ ತಾರತಮ್ಯವೆಸಗಿರುವುದು ಗ್ರಾ.ಪಂ ಅಧಿಕಾರಿಗಳ ಹಾಗೂ ಅಧ್ಯಕ್ಷರ ನಿರ್ಲಕ್ಷವೇ ಕಾರಣವಾಗಿದೆ. ಗ್ರಾಮದ ಹಲವೆಡೆಗಳಲ್ಲಿ 8-10 ಮನೆಗಳು ಒಂದೆಡೆಯಲ್ಲಿದೆ. ಅತಿ ಅವಶ್ಯವಿರುವ ಜನವಸತಿ ಪ್ರದೇಶಕ್ಕೆ ನೀರಿನ ಟ್ಯಾಂಕ್ ನಿರ್ಮಾಣ ಮಾಡದೇ 2 ಕುಟುಂಬಗಳಿಗೆ ಈ ಯೋಜನೆ ನಿರ್ಮಾಣ ಮಾಡಿರುವುದು ಸರಿಯಲ್ಲ ಎಂದು ಗ್ರಾಮಸ್ಥ ಆರ್.ಆರ್.ಹೆಗಡೆ ಆರೋಪಿಸಿದರು.
ಗ್ರಾ.ಪಂ ನಿಯಮಾವಳಿಗಳ ಪ್ರಕಾರ ಹಲವು ಬಾರಿ ಸಲಹಾ ಸಮಿತಿ ರಚನೆಯ ಕುರಿತು ಸಭೆಯಲ್ಲಿ ಠರಾವು ಮಾಡಿ ಎಂದು ಪ್ರಸ್ತಾಪವಾಗುತ್ತಲೇ ಇದೆ. ಆದರೆ ಸಲಹಾ ಸಮಿತಿ ರಚನೆ ಮಾಡುವಲ್ಲಿ ಗ್ರಾ.ಪಂ ಅಧ್ಯಕ್ಷರು ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಕೆ.ಎಸ್.ಹೆಗಡೆ ಆರೋಪಿಸಿದರು.
ಮಧ್ಯೆ ಪ್ರವೇಶಿಸಿದ ಗ್ರಾ.ಪಂ. ಸದಸ್ಯ ಶ್ರೀಧರ ಹೆಗಡೆ ಉತ್ತರಿಸಿ ಸಲಹಾ ಸಮಿತಿ ರಚನೆ ಮಾಡಲು ಸಾಧ್ಯವಿಲ್ಲ. ಪ್ರತಿ ಗ್ರಾಮ ಸಭೆಗೆ ನೀವು ಗಲಾಟೆಗಾಗಿಯೇ ಬರುತ್ತೀರಿ. ನಿಮಗೆ ಬೇರೆ ಕೆಲಸವಿಲ್ಲ ಎಂದು ಗ್ರಾಮಸ್ಥ ಕೆ.ಎಸ್.ಹೆಗಡೆಯವರ ಮೇಲೆ ವಾಗ್ದಾಳಿ ನಡೆಸಿದರು. ನಂತರ ಸಭೆ ಗದ್ದಲದ ಗೂಡಾಗಿ ಮಾತಿನ ಚಕಮಕಿ ನಡೆಯಿತು.
-gaju
Leave a Comment