ಹೊನ್ನಾವರ :
ಹೊನ್ನಾವರ ತಾಲೂಕಿನ ನವಿಲಗೋಣ ಗ್ರಾಮ ಪಂಚಾಯತಿ ಹಿಂದಿನ ಅಧ್ಯಕ್ಷ ಸುರೇಶ ರಾಮ ಪಟಗಾರರ ಹಾಲಿ ಸದಸ್ಯತ್ವ ರದ್ದುಗೊಳಿಸಿ ಸರಕಾರ ಆದೇಶ ಮಾಡಿದೆ. ಆ ಮೂಲಕ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸದಸ್ಯತ್ವ ರದ್ಧತಿಗೊಂಡ ಏಕೈಕ ಪ್ರಕರಣ ಇದೆಂದು ಭಾವಿಸಲಾಗಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 43(ಎ) ರನ್ವಯ ನವಿಲಗೋಣ ಗ್ರಾಮ ಪಂಚಾಯತಿ ಸದಸ್ಯ ಸುರೇಶ ರಾಮ ಪಟಗಾರ ರ ಸದಸ್ಯತ್ವ ರದ್ಧತಿ ಆದೇಶ ಮಾರ್ಚ್ 20 ರಂದು ಹೊರಡಿಸಲಾಗಿದ್ದು, ಇದು ತಕ್ಷಣದಿಂದ ಜಾರಿಗೆ ಬರುತ್ತದೆ ಎಂದು ತಿಳಿಸಲಾಗಿದೆ.
ನವಿಲುಗೋಣದ ರವಿ ನಾಗಪ್ಪ ನಾಯ್ಕ ಎನ್ನುವವರು ನವಿಲುಗೋಣ ಗ್ರಾಮ ಪಂಚಾಯತಿ ಹಿಂದಿನ ಅಧ್ಯಕ್ಷರಾಗಿದ್ದ ಸುರೇಶ ರಾಮ ಪಟಗಾರ ವಿರುದ್ಧ ಲೋಕಾಯುಕ್ತಕ್ಕೆ 2006 ರಿಂದ 2011 ರ ಅವಧಿಯಲ್ಲಿ ನಿರ್ಮಲ ಗ್ರಾಮ, ಇಂದಿರಾ ಆವಾಸ್ ಯೋಜನೆ ಹಾಗೂ ನರೇಗಾ ಯೋಜನೆಯಡಿಯಲ್ಲಿ ಹಣ ದುರುಪಯೋಗ ಮಾಡಿದ್ದರೆನ್ನುವ ದೂರು ಸಲ್ಲಿಸಿದ್ದರು. ಈ ದೂರಿನನ್ವಯ ಕೈಗೊಂಡ ತನಿಖಾ ವರದಿಯಲ್ಲಿ ಸುರೇಶ ಪಟಗಾರ ಕರ್ತವ್ಯಲೋಪವೆಸಗಿರುವುದು ಖಾತ್ರಿಯಾಗಿದ್ದು, ಇವರ ವಿರುದ್ಧ ಪಂಚಾಯತ ರಾಜ್ ಅಧಿನಿಯಮದಡಿ ಕ್ರಮ ಕೈಗೊಳ್ಳಲು ಉಪಲೋಕಾಯುಕ್ತರು ಶಿಫಾರಸ್ಸು ಮಾಡಿದ್ದರು.
2006 ರಿಂದ 2010 ರವರೆಗೆ ಶೇ.40 ರಷ್ಟು ಫಲಾನುಭವಿಗಳು ಶೌಚಾಲಯ ನಿರ್ಮಾಣ ಮಾಡಿಕೊಳ್ಳದೇ ಇದ್ದರೂ ಪ್ರೋತ್ಸಾಹಧನ ನೀಡಲಾಗಿದೆ. ಯಶೋಧಾ ಸುಬ್ರಾಯ ಭಂಡಾರಿ, ಶಾರದಾ ಗೋವಿಂದ ನಾಯ್ಕ, ಮೋಹಿನಿ ಅರುಣ ನಾಯ್ಕ, ಮಹಾಲಕ್ಷ್ಮಿ ಸುಬ್ರಾಯ ಹೆಗಡೆ, ದಾನಕೆ ಮಂಜುನಾಥ ಭಟ್, ಉಮಾ ಪರಮೇಶ್ವರ ನಾಯ್ಕ, ಆಶಾ ನಾಗೇಶ ದೇಶಭಂಡಾರಿ, ಜ್ಯೋತಿ ಉಮೇಶ ಹೆಗಡೆ ವಾಸಕ್ಕೆ ಮನೆಗಳಿದ್ದ ಕಾರಣ ಇವರು ಇಂದಿರಾ ಆವಾಜ್ ಯೋಜನೆಯಡಿಯಲ್ಲಿ ಫಲಾನುಭಾವಿಗಳಾಗಲು ಅರ್ಹತೆ ಇರದೇ ಇದ್ದರೂ ಯೋಜನೆಯ ಲಾಭವನ್ನು ಅರ್ಹ ಫಲಾನುಭವಿಗಳಿಗೆ ನೀಡದೇ ಅರ್ಹತೆ ಇಲ್ಲದವರಿಗೆ ದನದ ಕೊಟ್ಟಿಗೆ, ಸ್ಟೋರ್ ರೂಮು ಮತ್ತು ಇತರೆ ಉಪಯೋಗದ ಕಟ್ಟಡ ನಿರ್ಮಿಸಿದ ಅವರುಗಳಿಗೆ ಯೋಜನೆಯ ಅಡಿಯಲ್ಲಿ ಹಣ ಮಂಜೂರಿ ಮಾಡಿ ಇಂದಿರಾ ಆವಾಜ್ ಯೋಜನೆ ಮೂಲ ಉದ್ದೇಶ ವಿಫಲಗೊಳಿಸಲಾಗಿದೆ. ರಾಷ್ಟ್ರೀಯ ಗ್ರಾಮ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಸಂತೋಷ ವೆಂಕಟರಮಣ ಭಟ್, ಸವಿತಾ ಹನುಮಂತ ಮುಕ್ರಿ, ಹನುಮಂತ ನಾಗು ಮುಕ್ರಿ, ಷಣ್ಮುಗ ಮಂಜು ಗೌಡ ಇವರು ಕೆಲಸ ಮಾಡದೇ ಇದ್ದರೂ ಅವರ ಹೆಸರಲ್ಲಿ ಬ್ಯಾಂಕ್ ಖಾತೆಗಳಲ್ಲಿ ಪಂಚಾಯತಿಯಿಂದ ಹಣ ಜಮಾ ಮಾಡಲಾಗಿದೆ ಎನ್ನುವ ಆರೋಪ ಸಾಬೀತಾಗಿದೆ.
ಈ ಬಗ್ಗೆ ವಿವಿಧ ಹಂತದಲ್ಲಿ ವಿಚಾರಣೆ ಮತ್ತು ಸಂಬಂಧಿಸಿದವರ ಹೇಳಿಕೆ ಪಡೆದ ನಂತರ ಪಂಚಾಯತ್ ರಾಜ್ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಇವರ ನ್ಯಾಯಾಲಯದಲ್ಲಿ ನಡೆಸಿದ ವಿಚಾರಣೆ ನಂತರ ಸುರೇಶ ರಾನ ಪಟಗಾರ ಕರ್ತವ್ಯಲೋಪವೆಸಗಿರುವುದು ಕಂಡು ಬಂದಿದೆ. ಹೀಗಾಗಿ ಹಾಲಿ ಸದಸ್ಯರೂ ಆಗಿರುವ ಸುರೇಶ ರಾಮ ಪಟಗಾರ ಇವರ ವಿರುದ್ಧ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 43(ಎ) ದಂತೆ ನವಿಲುಗೋಣ ಗ್ರಾಮ ಪಂಚಾಯತಿ ಸದಸ್ಯತ್ವ ಸ್ಥಾನದಿಂದ ತೆಗೆದು ಹಾಕಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
-gaju
Leave a Comment