ಹೊನ್ನಾವರ:
ಬಹುಕಾಲದ ಹಿಂದೆ ಒತ್ತಡಕ್ಕೆ ಮಣಿದು ಹಿಂದೂ ಧರ್ಮದಿಂದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬಗಳನ್ನು ಮರಳಿ ಹಿಂದೂ ಮಾತೃಧರ್ಮಕ್ಕೆ ಕರೆತರುವ `ಘರ್‍ವಾಪಸಿ’ ಕಾರ್ಯಕ್ರಮವನ್ನು ರಾಮಸೇನೆಯ ಆಶ್ರಯದಲ್ಲಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಭಟ್ಕಳದಲ್ಲಿ ಏಪ್ರಿಲ್ 23 ರಂದು ಆಯೋಜಿಸಲಾಗಿದೆ ಎಂದು ರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಸಾದ ಅತ್ತಾವರ ತಿಳಿಸಿದರು.
ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು `ಭಾರತ ದೇಶದ ಪ್ರತಿಯೊಬ್ಬರೂ ಹಿಂದೂಗಳೇ ಆಗಿದ್ದರು. ಬ್ರಿಟಿಷರು ಮತ್ತು ಮೊಗಲರು ದೇಶದ ಮೇಲೆ ಆಕ್ರಮಣ ಮಾಡಿ ಸಂಪತ್ತು ಲೂಟಿ ಹೊಡೆಯುವ ಜೊತೆಯಲ್ಲಿ ಮತಾಂತರವನ್ನು ಮಾಡಿದ್ದರು. ಮತಾಂತರಗೊಂಡವರನ್ನು ಕಾನೂನು ಚೌಕಟ್ಟಿನಲ್ಲಿ ಹಿಂದೂ ಧರ್ಮಕ್ಕೆ ಕರೆತರಲಾಗುತ್ತಿದೆ. ಅವರಿಗೆ ಮುಂದೆ ಸೂಕ್ತ ಭದ್ರತೆಯನ್ನು ನೀಡಿ ಧರ್ಮದ ಮತ್ತು ಮಾನವೀಯತೆಯ ನೆಲೆಯಲ್ಲಿ ಅವರು ಸ್ವಾವಲಂಬಿ ಜೀವನ ನಡೆಸಲು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ರಾಮಸೇನಾದ ಉತ್ತರ ಪ್ರಾಂತ ಕಾರ್ಯದರ್ಶಿ ಶಂಕರ ನಾಯ್ಕ ಭಟ್ಕಳ ಮಾತನಾಡಿ, `ಭಟ್ಕಳ ಹಾಗೂ ಉತ್ತರ ಕನ್ನಡ ಜಿಲ್ಲೆಯ 18 ಕುಟುಂಬಗಳ 50 ಜನರನ್ನು ಘರ್‍ವಾಪಸಿ ಕಾರ್ಯಕ್ರಮದಲ್ಲಿ ಹಿಂದೂ ಧರ್ಮಕ್ಕೆ ಕರೆತರಲಾಗುವುದು. ಇವುಗಳಲ್ಲಿ 12 ಮುಸ್ಲಿಂ ಹಾಗೂ 6 ಕ್ರಿಶ್ಚಿಯನ್ ಕುಟುಂಬಗಳು ಸೇರಿವೆ. ಘರ್‍ವಾಪಸಿ’ ಕಾರ್ಯಕ್ರಮವನ್ನು ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಭಟ್ಕಳದಲ್ಲಿ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಭಾಗದ ಮಠಗಳ ಸ್ವಾಮೀಜಿಯವರು, ಹಿಂದೂಪರ ಸಂಘಟನೆಯ ಪ್ರಮುಖರು ಪಾಲ್ಗೊಳ್ಳುವರು. ಭಟ್ಕಳ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಅವರ ಹೆಸರುಗಳನ್ನು ಈಗಲೇ ಪ್ರಕಟಿಸುವುದಿಲ್ಲ. ಘರ್‍ವಾಪಸಿ ಕಾರ್ಯಕ್ರಮ ಭಟ್ಕಳದಲ್ಲಿ ಯಾವ ಸ್ಥಳದಲ್ಲಿ ನಡೆಯುವುದು ಎಂಬ ವಿವರವನ್ನು ಮುಂದೆ ತಿಳಿಸಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಉಡುಪಿ, ಮಂಡ್ಯ, ಮೈಸೂರು, ಚಿತ್ರದುರ್ಗ ಹಾಗೂ ಇತರ ಭಾಗಗಳಲ್ಲಿ ನಡೆಸಿ ಹಿಂದೂ ಧರ್ಮಕ್ಕೆ ಕರೆತರಾಗುವುದು. ರಾಜ್ಯದಲ್ಲಿ ಲವ್ ಜಿಹಾದ್‍ಗೆ ಒಳಗಾಗಿ ನೆಲೆಯಿಲ್ಲದೇ ಸಂಕಷ್ಟ ಅನುಭವಿಸುತ್ತಿರುವ ಮಹಿಳೆಯರನ್ನೂ ಹಿಂದೂ ಧರ್ಮಕ್ಕೆ ಮರಳಿ ಕರೆತರುವ ಕೆಲಸವೂ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಕುಮಾರ ಕರ್ಜೆ, ಕಾನೂನು ಸಲಹೆಗಾರ ಸಂತೋಷ ಉಡುಪಿ, ದ.ಕ. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.
-gaju
Leave a Comment