ಹೊನ್ನಾವರ:
ತಾಲೂಕು ಜೆಡಿಎಸ್ ಅಧ್ಯಕ್ಷರಾಗಿ ಸುಬ್ರಾಯ ಗೌಡ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ರಾಜ್ಯ ಸಮಿತಿ ಸದಸ್ಯ ಗಣಪಯ್ಯ ಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕು ಅಧ್ಯಕ್ಷ ಸ್ಥಾನ ಕೆಲವು ವರ್ಷಗಳಿಂದ ತೆರವಾಗಿತ್ತು. ಇದರಿಂದ ಪಕ್ಷದ ಸಂಘಟನೆಗೆ ತೊಡಕಾಗಿತ್ತು. ಈ ಬಗ್ಗೆ ಜಿಲ್ಲಾಧ್ಯಕ್ಷ ಬಿ.ಆರ್.ನಾಯ್ಕ ಅವರಿಗೆ ತಿಳಿಸಲಾಗಿತ್ತು. ಅವರು ಪಕ್ಷದ ಸಂಘಟನೆಗೆ ಒತ್ತು ನೀಡುವ ನಿಟ್ಟಿನಲ್ಲಿ ತಾಲೂಕು ಅಧ್ಯಕ್ಷರನ್ನಾಗಿ ಸುಬ್ರಾಯ ಗೌಡ ಅವರನ್ನು ನೇಮಕ ಮಾಡಿ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯತ ಬೂತ್ ಮಟ್ಟದಲ್ಲಿ ಪಕ್ಷ ಸಂಘಟಿಸಲು ಸೂಚಿಸಲಾಗಿದೆ. ಈ ಹಿಂದೆ ಹೊನ್ನಾವರ ತಾಲೂಕಿನಲ್ಲಿ ಎರಡು ಬ್ಲಾಕ್ ಸಮಿತಿ ರಚಿಸಲಾಗಿತ್ತು, ಆಗ ಇಬ್ಬರು ಅಧ್ಯಕ್ಷರಿದ್ದರು. ಈಗ ಅದನ್ನು ಬದಲಿಸಲಾಗಿದ್ದು, ತಾಲೂಕಿಗೆ ಒಬ್ಬರೇ ತಾಲೂಕಾಧ್ಯಕ್ಷರಾಗಿರುತ್ತಾರೆ ಎಂದು ತಿಳಿಸಿದರು.
ಜಿ.ಪಂ.ಸದಸ್ಯ, ಕುಮಟಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಸಂಘಟನಾ ಉಸ್ತುವಾರಿ ಪ್ರದೀಪ ನಾಯಕ ಮಾತನಾಡಿ ಮಾಜಿ ಶಾಸಕ ದಿನಕರ ಶೆಟ್ಟಿ ಬಿಜೆಪಿ ಸೇರಿದ್ದರಿಂದ ಪಕ್ಷದ ಅಸ್ತಿತ್ವ ಕಡಿಮೆಯಾಗಿದೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಗುಲ್ಲು ಹಾಕುತ್ತಿದ್ದಾರೆ. ಆದರೆ ಕುಮಟಾ-ಹೊನ್ನಾವರದಲ್ಲಿ ಪಕ್ಷದ ಸಂಘಟನೆ ಸುಭದ್ರವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಹೊನ್ನಾವರ ಭಾಗದಿಂದ 10 ಸಾವಿರಕ್ಕೂ ಹೆಚ್ಚು ಮತಗಳು ದೊರಕಿದೆ. ದಿನಕರ ಶೆಟ್ಟಿ ಜೊತೆಯಲ್ಲಿ ಅವರ ಕೆಲವು ಅಭಿಮಾನಿಗಳು ಹಿತೈಷಿಗಳು ಹೋಗಿದ್ದಾರೆ. ಪಕ್ಷದ ಬಹುತೇಕ ಮುಖಂಡರು, ಕಾರ್ಯಕರ್ತರು ಪಕ್ಷದಲ್ಲಿ ಸಂಘಟಿತರಾಗಿದ್ದಾರೆ. ದಿನಕರ ಶೆಟ್ಟಿ ಅವರು ನಿರಾಸಕ್ತಿ ಧೋರಣೆಯಿಂದಾಗಿ ಹೊನ್ನಾವರ ಭಾಗದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಹಿಂದೆಯೇ ತಾಲೂಕು ಅಧ್ಯಕ್ಷರನ್ನು ನೇಮಿಸಿದ್ದರೆ ದಿನಕರ ಶೆಟ್ಟಿ ಗೆಲ್ಲುತ್ತಿದ್ದರೇನೋ ಎಂದರು.
ಜಿಲ್ಲೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಬಂಗಾರಪ್ಪ ಅವರ ಅಭಿಮಾನಿಗಳು, ಕಾರ್ಯಕರ್ತರು ಗಣನೀಯ ಪ್ರಮಾಣದಲ್ಲಿದ್ದಾರೆ. ಯುವಕರು ನಮ್ಮ ಪಕ್ಷಕ್ಕೆ ಬರಮಾಡಿಕೊಂಡು ತಳಮಟ್ಟದಿಂದ ಪಕ್ಷ ಕಟ್ಟಬೇಕು. ಏಪ್ರಿಲ್ 10 ರಂದು ಪಕ್ಷದ ನಾಯಕ ಮಧು ಬಂಗಾರಪ್ಪ ಅವರು ಜಿಲ್ಲೆಗೆ ಆಗಮಿಸಲಿದ್ದು, ಕಾರ್ಯಕರ್ತರಿಗೆ ಸ್ಪೂರ್ತಿ ತುಂಬಲಿದ್ದಾರೆ ಎಂದು ಅವರು ತಿಳಿಸಿದರು.
ನೂತನ ಅಧ್ಯಕ್ಷ ಸುಬ್ರಾಯ ಗೌಡ ಅವರಿಗೆ ಪಕ್ಷದ ಶಾಲು ಹೊದೆಸಿ ಜವಾಬ್ದಾರಿ ವಹಿಸಲಾಯಿತು. ಸುಬ್ರಾಯ ನಾಯ್ಕ ಮಾತನಾಡಿ ಪಕ್ಷದ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ತಾಲೂಕಿನ 28 ಗ್ರಾಮ ಪಂಚಾಯತಿ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲ ಸಮಾಜದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಲಾಗುವುದು ಯುವಕರನ್ನು ಪಕ್ಷಕ್ಕೆ ಕರೆತಂದು ಸಂಘಟಿಸಲಾಗುವುದು. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗಜು ನಾಯ್ಕ, ಜೆಡಿಎಸ್ ಮುಖಂಡರಾದ ವಿ.ಎಂ.ಭಂಡಾರಿ, ತಾ.ಪಂ.ಸದಸ್ಯ ಈಶ್ವರ ನಾಯ್ಕ, ತುಕಾರಾಮ ನಾಯ್ಕ, ರಾಜೇಶ ನಾಯ್ಕ, ಶ್ರೀಪಾದ ನಾಯ್ಕ, ಕಮಲಾಕರ ಮುಕ್ರಿ ಇತರರು ಉಪಸ್ಥಿತರಿದ್ದರು.
-gaju
Leave a Comment