ಭಟ್ಕಳ:
ರೋಟರಿ ಕ್ಲಬ್ ಹಾಗೂ ನ್ಯೂ ಇಂಗ್ಲೀಷ್ ಶಾಲೆಯ ಸಹಭಾಗಿತ್ವದಲ್ಲಿ ರೋಟರಿ ವೃತ್ತಿಯಾಧಾರಿತ ತರಬೇತಿ ಕೇಂದ್ರವನ್ನು ಇಲ್ಲಿನ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ರೋಟರಿ ಜಿಲ್ಲಾ ಗವರ್ನರ್ ವಿಜಯಕುಮಾರ್ ಪೈ ರಾಯಕರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಇಂತಹ ವೃತ್ತಿಯಾಧಾರಿತ ತರಬೇತಿಯಿಂದ ಮಹಿಳೆಯರು ಸ್ವ ಉದ್ಯೋಗವನ್ನು ಮಾಡಲು ಸಾಧ್ಯವಾಗುವುದು. ರೋಟರಿ ಸಂಸ್ಥೆ ಜನರಿಗಾಗಿ ಇಷ್ಟೊಂದು ಹಣ ಖರ್ಚು ಮಾಡಿ ತರಬೇತಿ ಸಂಸ್ಥೆಯನ್ನು ಸ್ಥಾಪಿಸಿದೆ, ಇದನ್ನು ಸದುಪಯೋಗ ಪಡಿಸಿಕೊಳ್ಳುವ ಜವಾಬ್ದಾರಿ ಜನರದ್ದು ಎಂದ ಅವರು ಇಂತಹ ತರಬೇತಿಯಲ್ಲಿ ತಯಾರಾದ ವಸ್ತುಗಳನ್ನು ಮಾರುಕಟ್ಟೆ ಮಾಡುವುದರಿಂದ ಕ್ಲಬ್ಗೆ ಆದಾಯ ಬರುವುದು ಅಲ್ಲದೇ ಮಾರುಕಟ್ಟೆಯಲ್ಲಿ ಈ ಒಂದು ವಸ್ತು ಪ್ರಚಾರವನ್ನು ಪಡೆಯುವುದು ಎಂದರು.
ರೋಟರಿ ಸಂಸ್ಥೆ ಪೊಲಿಯೋ ನಿರ್ಮೂಲನೆಗೆ ತನ್ನ ಅತ್ಯಂತ ಮಹತ್ವದ ಕೊಡುಗೆ ನೀಡಿದ್ದನ್ನು ಸ್ಮರಿಸಿದ ಅವರು ಸದಾ ಸಮಾಜಮುಖಿಯಾಗಿರುವ ಈ ಸಂಸ್ಥೆಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ನಾಯಕ ಅವರು ಮಾತನಾಡಿ ಯಾವುದೇ ಒಂದು ವಸ್ತುವನ್ನು ಉಚಿತವಾಗಿ ನೀಡಿದಾಗ ಅದರ ಕುರಿತು ಜನತೆ ಹೊಂದುವ ಭಾವನೆಯೇ ಬೇರೆಯಾಗುತ್ತದೆ. ರೋಟರಿ ಕ್ಲಬ್ ಅತ್ಯಂತ ಉತ್ತಮ ಕಾರ್ಯ ಮಾಡುತ್ತಿದ್ದು ಎಲ್ಲರ ಸಹಕಾರ ಅಗತ್ಯವಾಗಿದೆ. ನಮ್ಮ ವಿದ್ಯಾ ಸಂಸ್ಥೆ ಕಳೆದ ಅನೇಕ ವರ್ಷಗಳಿಂದ ವಿದ್ಯಾದಾನ ಮಾಡುತ್ತಿದ್ದು 3000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂದು ವಿದ್ಯಾಬ್ಯಾಸ ಮಾಡುತ್ತಿದ್ದಾರೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ರೋ. ಪ್ರಕಾಶ್ ಮಾತನಾಡಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ತರಬೇತಿ ಕೇಂದ್ರವನ್ನು ಮಾಡಲು ಸಹಕರಿಸಿದೆ. ಯಾವುದೇ ತರಬೇತಿಯು ನುರಿತ ತರಬೇತುದಾರರಿಲ್ಲದೇ ಪೂರ್ಣಗೊಳ್ಳಲು ಸಾಧ್ಯವಿಲ್ಲ. ಹಾಗೆಯೇ ಉತ್ತಮ ತರಬೇತುದಾರರು ಬೆಂಗಳೂರು, ಇತ್ಯಾದಿ ಕಡೆಯಿಂದ ಬರುತ್ತಿದ್ದು ಇದರ ಸದುಪಯೋಗ ಭಟ್ಕಳದ ಜನತೆ ಪಡೆಯುವಂತಾಗಲಿ ಎಂದು ಹಾರೈಸಿದರು.
ಮಹಿಳಾ ಸಂಘದ ಮುಖ್ಯಸ್ಥೆ ಸುಮಾವತಿ ಶೆಟ್ಟಿ ಮಾತನಾಡಿ ರೋಟರಿ ಕ್ಲಬ್ ಅನೇಕ ರೀತಿಯ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಪ್ರತಿಯೋರ್ವರಿಗೂ ಕೂಡಾ ಶೈಕ್ಷಣಿ ಅರ್ಹತೆಯೊಂದಿಗೆ ಬೇರೆ ಬೇರೆ ಅರ್ಹತೆಯೂ ಮುಖ್ಯವಾಗುವುದು. ಇಂತಹ ತರಬೇತಿಗಳಿಂದ ಸ್ವಾವಲಂಬಿಗಳಾಗಿ ಸಂಸಾರಕ್ಕೆ ಸಹಾಯವಾಗಲು ಸಾಧ್ಯ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ. ಮುಷ್ತಾಕ್ ಅಹಮ್ಮದ್ ಭಾವಿಕಟ್ಟಿ ಸ್ವಾಗತಿಸಿದರು. ಡಾ. ಗೌರೀಶ ಪಡುಕೋಣೆ ಅತಿಥಿಗಳನ್ನು ಪರಿಚಯಿಸಿ, ನಿರೂಪಿಸಿದರು. ರೋ. ಜೀಶಾನ್ ಅಹಮ್ಮದ್ ನೆನಪಿನ ಕಾಣಿಕೆ ನೀಡಿದರು. ಕಾರ್ಯದರ್ಶಿ ಶಾಕೀರ್ ಹುಸೇನ್ ವಂದಿಸಿದರು.
Leave a Comment