ಕಾರವಾರ:
ಸದಾಶಿವಗಡ ಕೋಟೆ ಕುಸಿತ, ಅರಗಾದಲ್ಲಿ ಬಂಡೆ ಕುಸಿತ, ಬಿಣಗಾದಲ್ಲಿ ಮಣ್ಣು ಕುಸಿತ, ಭಟ್ಕಳ ಬಳಿ ವಾಹನ ಕುಸಿತದ ನಂತರ ಭಾನುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೊಮ್ಮೆ ಗುಡ್ಡ ಕುಸಿತಗೊಳ್ಳುವದರ ಮೂಲಕ ಮೂವರನ್ನು ಬಲಿ ಪಡೆದಿದೆ. ಕುಮಟಾದ ದಿವಿಗಿಯಲ್ಲಿ ಬದುಕಿ ಬಾಳಬೇಕಿದ್ದ ಹಸುಳೆಯನ್ನು ಒಳಗೊಂಡು ಮೂವರು ಮಕ್ಕಳು ಜೀವ ಬಿಟ್ಟಿದ್ದಾರೆ. ಕರಾವಳಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಅವಾಂತರಗಳಿಗೆ ಕೊನೆಯಿಲ್ಲ ಎಂಬಂತಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣವನ್ನು ಐ.ಆರ್.ಬಿ ಕಂಪನಿ ವಹಿಸಿಕೊಂಡಿದೆ. ಕಳೆದ ಮೂರು ವರ್ಷಗಳಿಂದ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಅಂದಿನಿಂದ ಇಂದಿನವರೆಗೂ ಹೆದ್ದಾರಿ ಅಪಘಾತಗಳ ರಹದ್ದಾರಿಯಾಗಿ ಪರಿಣಮಿಸಿದೆ. ಕಳೆದ ಮೂರು ವರ್ಷದಿಂದ ಕುಂಟುತ್ತಿರುವ ರಾಷ್ಟ್ರೀಯ ಹೆದ್ದಾರಿ ಚತುಷ್ಫಥ ಕಾಮಗಾರಿ ಯಮರೂಪಿಯಾಗಿ ಬದಲಾಗಿದ್ದು, ಗುತ್ತಿಗೆ ಪಡೆದ ಐ.ಆರ್.ಬಿ ಸಂಸ್ಥೆಯ ನಿರ್ಲಕ್ಷತನದಿಂದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿದೆ. ಅವೈಜ್ಞಾನಿಕ ವಿದಾನಗಳ ಮೂಲಕ ಬಂಡೆಗಳನ್ನು ಒಡೆಯುವದು, ಅತಿಯಾದ ಸ್ಪೋಟಕಗಳ ಬಳಕೆ, ಅಸ್ಥವ್ಯಸ್ಥವಾಗಿರುವ ಹೆದ್ದಾರಿ ಜನರ ಜೀವದೊಂದಿಗೆ ಆಟವಾಡುತ್ತಿದೆ.
ಮಹಾರಾಷ್ಟ್ರದ ಪನವೇಲ್ನಿಂದ ಕೇರಳದ ಕೊಚ್ಚಿಗೆ ಸಂಪರ್ಕಿಸುವ ಈ ಹೆದ್ದಾರಿ(66) ಇದಾಗಿದ್ದು, ಕಾರವಾರದ ಮುದಗಾ ಘಟ್ಟ, ಅರಗಾ ಹಾಗೂ ಅಂಕೋಲಾದಲ್ಲಿರುವ ಗುಡ್ಡಗಳನ್ನು ಅವೈಜ್ಷಾನಿಕವಾಗಿ ತೆರವುಗೊಳಿಸಲಾಗಿದೆ. ಗುಡ್ಡದ ಮಣ್ಣನ್ನು ಕಡಿದಾಗಿ ತೆರವುಗೊಳಿಸಿದ್ದರಿಂದ ಮಳೆಯಲ್ಲಿ ಕುಸಿತಗಳು ಸಂಭವಿಸುತ್ತಿವೆ. ಇನ್ನೂ ಹೆದ್ದಾರಿಯುದ್ದಕ್ಕೂ ಈ ಹಿಂದೆ ಇದ್ದ ಚರಂಡಿಯನ್ನು ಮುಚ್ಚಿದ ಕಾರಣ ಮಳೆಗಾಲದಲ್ಲಿ ನೀರು ತುಂಬಿಕೊಂಡಿದೆ. ಮೂಡಭಟ್ಕಳ, ಅರ್ಗಾ, ಹೊನ್ನಾವರದ ಮಂಕಿ ಸೇರಿದಂತೆ ಹೆದ್ದಾರಿಯುದ್ದಕ್ಕೂ ಮಳೆ ನೀರು ಸಂಗ್ರಹವಾಗಿದ್ದು, ಇದು ಹಲವು ಅವಘಡಗಳಿಗೆ ಕಾರಣವಾಗುತ್ತಿದೆ.
ಕಳೆದ ವರ್ಷ ಕಾರವಾರದ ಸದಾಶಿವಗಡ ಗುಡ್ಡ ತೆರವಿನ ವೇಳೆ ಭಾರಿ ಗಾತ್ರದ ಕಲ್ಲೊಂದು ಚಲಿಸುತ್ತಿರುವ ಓಮಿನಿಯ ಮೇಲೆ ಬಿದ್ದು ದಂಪತಿಗಳಿಬ್ಬರು ಗಾಯಗೊಂಡಿದ್ದರು. ಅರಗಾ ಘಟ್ಟದಲ್ಲಿ ಭಾರಿ ಗಾತ್ರದ ಬಂಡೆಕಲ್ಲೊಂದು ಸರಕಾರಿ ಬಸ್ಮೇಲೆ ಉರುಳಿ ಹಲವರು ಗಾಯಗೊಂಡಿದ್ದರು. ಅಲ್ಲದೆ ಬಿಣಗಾದಲ್ಲಿ ರಾತ್ರಿ ವೇಳೆ ಗುಡ್ಡ ಕುಸಿದಿತ್ತು. ಇದಲ್ಲದೆ ಕುಮಟಾದಲ್ಲಿ ಕಳೆದ ಎರಡು ವರ್ಷದ ಹಿಂದೆ ಮಳೆ ನೀರು ಹರಿದು ಹೋಗಲು ಐಆರ್ಬಿ ಕಂಪೆನಿಯವರು ಸೂಕ್ತ ವ್ಯವಸ್ಥೆ ಕಲ್ಪಿಸದ ಕಾರಣ ಮನೆಗಳಿಗೆ ನೀರು ನುಗ್ಗು ಹಾನಿ ಉಂಟಾಗಿತ್ತು. ಈ ಬಗ್ಗೆ ಮಳೆಗಾಲ ಪೂರ್ವದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಐಆರ್ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಮಳೆಗಾಲದಲ್ಲಿ ಮಳೆ ನೀರು ಹರಿದು ಹೋಗಲು ಮತ್ತು ಗುಡ್ಡ ಕುಸಿಯುವ ಭಾಗಗಳಲ್ಲಿ ಸೂಕ್ತ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದ್ದರು. ಅಲ್ಲದೆ ಹೆದ್ದಾರಿಯಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕುವಂತೆ ಸೂಚಿಸಿದ್ದರು. ಆದರೆ ಅದು ಪರಿಣಾಮಕಾರಿಯಾಗಿ ಅನುಷ್ಟಾನವಾಗಿಲ್ಲ.
Leave a Comment