ದಾಂಡೇಲಿ:
ನಗರದ ಜೆ.ಎನ್.ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನಲ್ಲಿ ಹತ್ತೂ ರೂ ನಾಣ್ಯ ಸ್ವೀಕೃತಿಗೆ ಸಂಬಂಧಪಟ್ಟಂತೆ ಕಳೆದ ಕೆಲ ದಿನಗಳಿಂದ ಗೊಂದಲ ಏರ್ಪಟ್ಟಿದ್ದು, ಬ್ಯಾಂಕ್ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ನಾಗರೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮೊನ್ನೆ ಶನಿವಾರ ನಗರದ ಯುವ ಮುಖಂಡ ಸುಧೀರ ಶೆಟ್ಟಿಯವರು ಎಂದಿನಂತೆ ತಮ್ಮ ಹಾಲಿನ ವ್ಯವಹಾರಕ್ಕೆ ಸಂಬಂಧಿಸಿದ ಹಣವನ್ನು ಹಾಲಿನ ಕಂಪೆನಿಯ ಉಳಿತಾಯ ಖಾತೆಗೆ ನೇರವಾಗಿ ವರ್ಗಾಯಿಸಲು ಸಿಂಡಿಕೇಟ್ ಬ್ಯಾಂಕಿಗೆ ಹೋಗಿದ್ದರು. ವರ್ಗಾಯಿಸಲು ನೀಡಿದ ರೂ: 28500/- ಹಣದಲ್ಲಿ ರೂ:1,500/- ಹತ್ತು ರೂಪಾಯಿಯ ನಾಣ್ಯಗಳು ಒಳಗೊಂಡಿತ್ತು. ಆದರೆ ಬ್ಯಾಂಕಿನ ಕ್ಯಾಶರ್ ಹತ್ತು ರೂಪಾಯಿಯ ನಾಣ್ಯವನ್ನು ಸ್ವೀಕರಿಸದೆ, ನಾವು ಹತ್ತು ರೂಪಾಯಿ ನಾಣ್ಯವನ್ನು ಸ್ವೀಕರಿಸುವುದಿಲ್ಲ ಎಂದು ಖಡ ಖಂಡಿತವಾಗಿ ಹೇಳಿ ವಾಪಾಸ್ಸು ನೀಡಿದ್ದರು. ಹತ್ತು ರೂಪಾಯಿ ನಾಣ್ಯ ಸ್ವೀಕರಿಸದಿರಲು ಕಾರಣಗಳೇನು, ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ನೀಡಿ ಎಂದಾಗ ಬ್ಯಾಂಕ್ ಅಧಿಕಾರಿಗಳು ಸುಧೀರ ಶೆಟ್ಟಿಯವರಿಗೆ ಗದರಿಸಿ, ಗೆಟ್ ಔಟ್ ಎಂದಿದ್ದರು.
ನಂತರದಲ್ಲಿ ಬ್ಯಾಂಕಿನ ಮೇಲಾಧಿಕಾರಿಗಳ ಗಮನಕ್ಕೆ ತಂದು ಅಲ್ಲಿಂದ ವಾಪಾಸ್ಸು ಬಂದಿದ್ದರು. ಇದಾದ ಬಳಿಕ ಸೋಮವಾರ ಮತ್ತೇ ಸುಧೀರ ಶೆಟ್ಟಿಯವರು ರೂ:62990 ಹಣವನ್ನು ವರ್ಗಾಯಿಸಲು ಬಂದಿದ್ದರು. ಇದರಲ್ಲಿ ಶನಿವಾರ ಹಿಂದುರುಗಿಸಿದ್ದ ರೂ: 1500/- ಮೊತ್ತದ ಹತ್ತು ರೂಪಾಯಿ ನಾಣ್ಯಗಳು ಒಳಗೊಂಡಿದ್ದವು. ಮತ್ತೇ ಕ್ಯಾಶರ್ ಹತ್ತು ರೂ ನಾಣ್ಯ ಸ್ವೀಕರಿಸುವುದಿಲ್ಲ ಎಂದು ಹೇಳಿ, ಬ್ಯಾಂಕಿನ ಹಿರಿಯ ಅಧಿಕಾರಿಯನ್ನು ಕ್ಯಾಸ್ ಕೌಂಟರಿಗೆ ಕರೆಸಿ ವಿಷಯ ತಿಳಿಸಿದರು. ಆಗ ಬ್ಯಾಂಕಿನ ಹಿರಿಯ ಅಧಿಕಾರಿ ಸುಧೀರ ಶೆಟ್ಟಿಯವರಲ್ಲಿ ನಿಮ್ಮ ಉಳಿತಾಯ ಖಾತೆ ನಮ್ಮ ಬ್ಯಾಂಕಿನಲ್ಲಿ ಇದೆಯಾ? ಎಂದು ಪ್ರಶ್ನಿಸಿದರು. ಆಗ ಸುಧೀರ ಶೆಟ್ಟಿಯವರು ಈ ಬ್ಯಾಂಕಿನಲ್ಲಿ ಇಲ್ಲ, ಆದರೆ ಹಳೆದಾಂಡೇಲಿಯ ಸಿಂಡಿಕೇಟ್ ಬ್ಯಾಂಕಿನಲ್ಲಿದೆ ಎಂದರು. ಅದಕ್ಕೆ ಹಿರಿಯ ಅಧಿಕಾರಿ ನಿಮ್ಮದು ನಮ್ಮಲ್ಲಿ ಉಳಿತಾಯ ಖಾತೆನೆ ಇಲ್ಲ ಎಂದರಲ್ಲದೇ ಸುಧೀರ ಶೆಟ್ಟಿಯವರಿಗೆ ಅವರ ವೈಯಕ್ತಿಕ ವ್ಯವಹಾರದ ಬಗ್ಗೆ ಪ್ರಶ್ನಿಸತೊಡಗಿದರು. ಮಾತಿಗೆ ಮಾತು ಬೆಳದು ಕೊನೆಗೆ ಹತ್ತು ರೂ ನಾಣ್ಯದ ರೂ:1000/- ವನ್ನಷ್ಟೆ ಸ್ವೀಕರಿಸಿ, ಉಳಿದ ಹತ್ತು ರೂ ಗಳ ರೂ:500/- ಹಿಂದುರಿಗಿಸಿದರು.
ಬ್ಯಾಂಕಿನ ಹಿರಿಯ ಅಧಿಕಾರಿ ನಮಗೆ ಏಕಕಾಲಕ್ಕೆ ರೂ:1000/- ವಷ್ಟೆ ಹತ್ತು ರೂ ನಾಣ್ಯಗಳನ್ನು ಸ್ವೀಕರಿಸಲು ಅನುಮತಿಯಿದೆ ಎಂದು ಕಾಗದ ಪತ್ರಗಳನ್ನು ತೋರಿಸಿದರು.
ಒಟ್ಟಿನಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಯ ವರ್ತನೆ ಹಾಗೂ ದರ್ಪದ ಮಾತುಗಳು ಬಹುತೇಕ ಗ್ರಾಹಕರನ್ನು ಕೆರಳಿಸಿತ್ತಲ್ಲದೆ, ಈ ಅಧಿಕಾರಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮೇಲಾಧಿಕಾರಿಗಳಿಗೆ ಲಿಖಿತ ಮನವಿ ನೀಡುವುದಾಗಿ ಸುಧೀರ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.
Leave a Comment