ಕಾರವಾರ:
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕಳೆದ 12 ವರ್ಷಗಳಿಂದ ಬಡವರಿಗೆ, ನಿರ್ಗತಿಕರಿಗೆ ಮಾಸಾಶನ ನೀಡುತಿದ್ದು, ಈ ಬಾರಿ ಜಿಲ್ಲೆಯ 269 ಜನರು ಈ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ.ಗುರು ಭವನದಲ್ಲಿ ಮಂಗಳವಾರ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ, ಜಿಲ್ಲಾಮಟ್ಟದ ಮಾಸಾಶನ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು. ಈ ವೇಳೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಬಡ ಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಯೋಜನೆಯು ಆಯಾ ಭಾಗದಲ್ಲಿ ದೀರ್ಘಕಾಲದ ಅನಾರೋಗ್ಯಕ್ಕೊಳಗಾದವರು, ಅಂಗವಿಕಲರು, ಬಡವರು ಸೇರಿದಂತೆ ಇನ್ನಿತರರಿಗೆ ಸ್ವಾವಲಂಬಿಯಾಗಿ ಬದುಕಲು ಸಹಕಾರ ನೀಡಲಾಗುತ್ತಿದೆ ಎಂದು ಹೇಳಿದರು.ಉತ್ತರಕನ್ನಡ ಜಿಲ್ಲೆಯ 2016 ಏಪ್ರಿಲ್ ನಿಂದ 2017 ಮಾರ್ಚ್ ರವರೆಗೆ ಒಟ್ಟು 269 ಫಲಾನುಭವಿಗಳಿಗೆ 16 ಲಕ್ಷದ 34 ಸಾವಿರ ಮಾಸಾಶನ ವಿತರಿಸಲಾಗಿದೆ. ಅದರಲ್ಲಿ ಕುಮಟಾದ 27, ಹೊನ್ನಾವರ 69, ಕಾರವಾರ 34, ಶಿರಸಿ 68, ಯಲ್ಲಾಪುರ 37, ದಾಂಡೇಲಿಯ 34 ಫಲಾನುಭವಿಗಳು ಆಯ್ಕೆಯಾಗಿದ್ದಾರೆ.ಜಿಲ್ಲಾ ನಿರ್ದೇಶಕ ಲಕ್ಷ್ಮಣ ಎಂ. ಮಾತನಾಡಿ, ಬಡವರಿಗೆ ಹೆಚ್ಚು ಅವಶ್ಯವಿರುವ ಮಾಸಾಶನವನ್ನು ಸಂಘವು ಪ್ರತಿ ವರ್ಷವೂ ನೀಡುತ್ತಿದೆ. ಇದನ್ನು ಮಹಿಳೇಯರು ತಮ್ಮ ವೈದ್ಯಕೀಯ ಖರ್ಚಿಗಾಗಿ, ಕುಟುಂಬದ ನಿರ್ವಹಣೆಗಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬೇರೆ ಬೇರೆ ಖಾಯಿಲೆಗಳಿಂದ, ಅಪಘಾತದಿಂದ ಪತಿ, ಮಕ್ಕಳನ್ನು ಕಳೆದುಕೊಂಡವರಿಗೆ, ಅಂಗವಿಕಲರಾದವರಿಗೆ ಪ್ರತಿ ತಿಂಗಳು ರೂ. 750 ರಿಂದ ರೂ. 1,000ದವರೆಗೆ ಮಾಸಾಶನ ನೀಡುತ್ತಿದ್ದೇವೆ. ಆಯಾ ಕುಟುಂಬದ ಪರಿಸ್ಥಿತಿಯನನು ಅಧ್ಯಯನ ಮಾಡಿ ಅದನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ, ಶಿಕ್ಷಣ, ಸ್ವಚ್ಛತೆ ಸೇರಿದಂತೆ ಇನ್ನಿತರ ಕಾರ್ಯಗಳಿಂದ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಪರಿವರ್ತನೆಗಳಾಗಿವೆ. ಗ್ರಾಮೀಣ ಪ್ರದೇಶದ ಜನರಿಗೆ ಅವಶ್ಯವಿರುವ ಸ್ವ ಉದ್ಯೋಗ ತರಬೇತಿ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ, ಕೃಷಿ ಯಂತ್ರೋಪಕರಣಗಳ ವಿತರಣೆ, ಜನಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ನೆರವು ನೀಡಲಾಗುತ್ತಿದೆ ಎಂದರು. ಯೋಜನಾಧಿಕಾರಿ ಶೇಖರ ನಾಯ್ಕ ಇತರರಿದ್ದರು.
Leave a Comment