ಕಾರವಾರ:
ಅರಣ್ಯ ಅತಿಕ್ರಮಣದಾರರ ಅರ್ಜಿ ವಿಲೆವಾರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ಹೊಸ ಚಿಂತನೆಯೊಂದನ್ನು ಜಾರಿಗೆ ತಂದಿದೆ.
ತಲಾ ತಲಾಂತರಗಳಿಂದ ಭೂಮಿ ಹಕ್ಕು ಪಡೆಯದೇ ಇದ್ದ ಕಾಡಂಚಿನ ಅನುಸೂಚಿತ ಬುಡಕಟ್ಟು ಹಾಗೂ ಪಾರಂಪರಿಕ ಅರಣ್ಯ ವಾಸಿಗಳಿಗೆ ಸರ್ಕಾರ ಭೂಮಿಯ ಹಕ್ಕು ಕೊಡುವ ಅರಣ್ಯ ಹಕ್ಕು ಕಾಯ್ದೆಯನ್ನು ಜಾರಿಗೆ ತಂದಿದ್ದು ಮಹತ್ವದ ಮೈಲಿಗಲ್ಲು ಎನ್ನಬಹುದಾಗಿದೆ. ಆರಂಭದಲ್ಲಿ ಕಾಯಿದೆಯಲ್ಲಿನ ಕೆಲವು ಗೊಂದಲಗಳು ಕಾಯಿದೆ ಅನುಷ್ಠಾನಕ್ಕೆ ಕುಂಟಿತವಾದರೂ 2012ರ ತಿದ್ದುಪಡಿ ಕಾಯಿದೆ ಅನುಷ್ಠಾನ ನಂತರ ವೇಗ ಪಡೆಯಿತು. ಆದರೂ ಪಾರಂಪರಿಕ ಅರಣ್ಯವಾಸಿಗಳು ತಮ್ಮ ಹಕ್ಕು ಪಡೆಯಲು ದಾಖಲೆಗಳೊಂದಿಗೆ ಸಲ್ಲಿಸಿದ ಅರ್ಜಿಗಳ ಹಂತ ತಿಳಿಯಲು ತೊಂದರೆ ಅನುಭವಿಸಬೇಕಾಗಿತ್ತು. ಇದನ್ನು ಗಮನಿಸಿದ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಅರ್ಜಿದಾರರ ದಾಖಲೆಗಳನ್ನು ಗಣಕೀರಣ ಮಾಡುವುದರಿಂದ ಈ ವಿಳಂಬವನ್ನು ತಪ್ಪಿಸಬಹುದು ಮತ್ತು ಅರ್ಜಿದಾರರಿಗೆ ಹಕ್ಕು ದೊರಕಿಸಿ ಶೀಘ್ರ ನ್ಯಾಯ ಒದಗಿಸಬಹುದೆಂದು ಮನಗಂಡು ಅರಣ್ಯ ಹಕ್ಕು ಕಾಯಿದೆಗೇ ಪ್ರತ್ಯೇಕ ತಂತ್ರಾಂಶವೊಂದನ್ನು ಎನ್ಐಸಿ ಸಹಕಾರದಲ್ಲಿ ರೂಪಿಸಿದ್ದಾರೆ.
`ಫಾರೆಸ್ಟ್ ರೈಟ್ಸ್ ಮಾನಿಟರಿಂಗ್ ಸಿಸ್ಟಂ’ ಎಂಬ ತಂತ್ರಾಶದಡಿ ಕಾಯ್ದೆ ಅನುಷ್ಠಾನದಲ್ಲಿ ವೇಗ ಮತ್ತು ಸ್ಪಷ್ಟತೆ ಹಾಗೂ ಅರ್ಜಿದಾರರಿಗೆ ನಿಖರತೆ ತಿಳಿಯಬಹುದಾಗಿದೆ. ಈ ತಂತ್ರಾಂಶದ ಮೂಲಕ ಅರಣ್ಯ ಹಕ್ಕು ಕಾಯಿದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಪ್ರತ್ಯೇಕ ತಂತ್ರಾಂಶ ಅಳವಡಿಸಿ ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ. ಗ್ರಾಮ ಅರಣ್ಯ ಹಕ್ಕು ಸಮಿತಿಯಲ್ಲಿ ಬಂದ ಅರ್ಜಿಗಳನ್ನು ಗ್ರಾಮಸಭೆಯಲ್ಲಿ ಪರಿಶೀಲಿಸಿ ಅಲ್ಲಿಂದ ನೇರವಾಗಿ ವಿಭಾಗ ಮಟ್ಟದ ಕಚೇರಿ ಕಳಿಸಿ ಅಲ್ಲಿರುವ ಡಾಟಾ ಎಂಟ್ರಿ ಆಪರೇಟರ್ ಮೂಲಕ ಅರ್ಜಿದಾರರ ಸಂಪೂರ್ಣ ದಾಖಲೆಗಳು ಗಣಕೀಕರಣಗೊಳಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿಯೇ ಕಾರ್ಯದರ್ಶಿಯಾಗಿರುವ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆ ಅರ್ಜಿಯನ್ನು ಪರಿಶೀಲಿಸಿ ಅರ್ಜಿದಾರರಿಗೆ ಒಂದು ವಿಶಿಷ್ಟ ಸಂಖ್ಯೆಯ ನಂಬರನ್ನು ಹಿಂಬರಹವಾಗಿ ನೀಡುತ್ತಾರೆ.
ನಂತರ ವಿಭಾಗ ಮಟ್ಟದಲ್ಲಿ ಅನುಮೋದನೆಗೆ ಕಳುಹಿಸಲಾಗುತ್ತದೆ. ವಿಭಾಗ ಮಟ್ಟದಲ್ಲಿ ಅನುಮೋದನೆಗೊಂಡ ಅರ್ಜಿ ನೇರವಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅನುಮೊದನೆ ಪಡೆದು ನೇರವಾಗಿ ಭೂಮಿ ತಂತ್ರಾಂಶಕ್ಕೆ ಕಳುಹಿಸಲಾಗುತ್ತದೆ. ಅಲ್ಲಿ ಅರ್ಜಿದಾರರಿಗೆ ತಮ್ಮ ಭೂಮಿಯ ಪಟ್ಟಾ ಮತ್ತು ಪಹಣಿ ಮುದ್ರಿತ ಪ್ರತಿ ಸಿಗುತ್ತದೆ. ಈ ಎಲ್ಲ ಪ್ರಕ್ರಿಯೆಯನ್ನು ಅರ್ಜಿದಾರರು ತಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬುದನ್ನು ತಾಲೂಕು ಮಟ್ಟದಲ್ಲಿ ತಮಗೆ ನೀಡಲಾಗುವ ವಿಶಿಷ್ಠ ಸಂಖ್ಯೆಯಿಂದ ಎಲ್ಲಿಂದಲೂ ನೋಡಲು ಅವಕಾಶವಿದೆ ಮತ್ತು ತಮ್ಮ ಅರ್ಜಿಯ ಎಲ್ಲ ದಾಖಲೆಗಳೂ ಗಣಕೀರಣಗೊಳ್ಳುವುದರಿಂದ ಮುಂದಿನ ಹಂತದಲ್ಲಿ ತಮ್ಮ ದಾಖಲೆಗಳು ಕೈತಪ್ಪುತ್ತವೆ ಎಂಬ ಆತಂಕವೂ ಇರುವುದಿಲ್ಲ.
2016 ಅಕ್ಟೋಬರ್ 31ಕ್ಕೆ ಅರ್ಜಿ ಸಲ್ಲಿಸಲು ನೀಡಲಾಗಿದ್ದ ವಾಯಿದೆ ಮುಗಿದಿದ್ದು ಇದೀಗ ರಾಜ್ಯಾದ್ಯಂತ ಅರ್ಜಿಗಳ ಪರಿಶೀಲನೆ ಹಂತ ನಡೆಯುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 1176 ಗ್ರಾಮ ಅರಣ್ಯ ಸಮಿತಿಗಳನ್ನು ರಚಿಸಲಾಗಿದ್ದು, ನಗರ ಮತ್ತು ಪಟ್ಟಣ ಪ್ರದೇಶದಲ್ಲಿ 213 ವಾರ್ಡ್ ಅರಣ್ಯ ಹಕ್ಕು ಸಮಿತಿಗಳನ್ನು ರಚಿಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 88,727 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಇತರೆ ಸರ್ವೆ ನಂಬರ್ನಲ್ಲಿ 10,516 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈವೆರೆಗೆ 31,511 ಅರ್ಜಿಗಳನ್ನು ಪರಿಶೀಲಿಸಲಾಗಿದ್ದು, 57,216 ಅರ್ಜಿಗಳು ವಿವಿಧ ಕಾರಣಗಳಿಗಾಗಿ ಬಾಕಿ ಇವೆ. ಜಿಲ್ಲಾ ಮಟ್ಟದಲ್ಲಿ 2673 ಅರ್ಜಿಗಳನ್ನು ಮಾನ್ಯ ಮಾಡಿ ಶೇಕಡಾವಾರು ಹೆಚ್ಚು ಅರಣ್ಯ ಹಕ್ಕು ಪತ್ರಗಳನ್ನು ವಿತರಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ವಾರ್ತಾಧಿಕಾರಿ ಹಿಮಂತರಾಜು ಜಿ. ವಿವರಿಸಿದ್ದಾರೆ.
Leave a Comment