ಕಾರವಾರ:
ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಗೆ ಅಧಿಕಾರಿಗಳು ಬಾರದಿರುವದಕ್ಕೆ ಅಧಿಕಾರಿಗಳ ವಿರುದ್ದ ಸದಸ್ಯರು ಸಿಡಿಮಿಡಿಗೊಂಡರು.
ತಾ.ಪಂ ಸಭಾಭವನದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರಾಗಿರುವುದನ್ನು ಗಮನಿಸಿದ ಸದಸ್ಯರಾದ ಪ್ರಶಾಂತ ಗೋವೆಕರ್, ಮಾರುತಿ ನಾಯ್ಕ, ಸುರೇಂದ್ರ ಗಾಂವಕರ್ ಆಕ್ಷೇಪ ವ್ಯಕ್ತಪಡಿಸಿದರು. ಅಧಿಕಾರಿಗಳು ಪ್ರತಿ ಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಬೇಕೆಂದರೆ ಗೈರಾಗುತ್ತಿದ್ದಾರೆ. ಇದರಿಂದ ಪ್ರಗತಿಗೆ ಕುಂಠಿತವಾಗುತ್ತಿದೆ. ನಾವೆಲ್ಲರು ಬಹಿಷ್ಕರಿಸುತ್ತೇವೆ ಎಂದರು.
ಈ ವೇಳೆ ಮಾತನಾಡಿದ ಕಾರ್ಯನಿರ್ವಹಣಾಧಿಕಾರಿ ಶ್ರೀಕಾಂತ ಹೆಗಡೆ, ವಿವಿಧ ಇಲಾಖೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಭೆಗೆ ಬರುತ್ತಿಲ್ಲ. ಸಭೆಗೆ ಬರುವಂತೆ ನಾವು ಪೋನ್ ಮಾಡಬೇಕು. ಇನ್ನೂ ಕೆಲವರು ತಾವು ಬರುವ ಬದಲು ತಮ್ಮ ಇಲಾಖೆಯ ಕಿರಿಯ ಅಧಿಕಾರಿಗಳನ್ನು ಕಳುಹಿಸುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಅಲ್ಲದೆ ಸಭೆಯಲ್ಲಿ ಪ್ರಗತಿ ಓದಿದ ಬಳಿಕ ಹೇಳದೆ ಕೇಳದೆ ತೆರಳುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಅಕ್ಷರ ದಾಸೋಹ ಯೋಜನೆಯಡಿ ಕಳೆದ ತಿಂಗಳು ತಾಲೂಕಿನ ವಿವಿಧ ಭಾಗಗಳಲ್ಲಿ ವಿತರಿಸಿರುವ ತೊಗರಿ ಬೇಳೆಯು ಕಳಪೆಯಾಗಿದ್ದು, ಕೂಡಲೇ ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಟೆಂಡರ್‍ದಾರರನ್ನು ಬದಲಾಯಿಸಬೇಕು. ಅಲ್ಲದೆ ಇಂತಹ ಬೆಳೆಕಾಳುಗಳನ್ನು ಇನ್ನು ಮುಂದೆ ಪೂರೈಕೆ ಮಾಡಬಾರದು ಎಂದು ಸದಸ್ಯ ಮಾರುತಿ ನಾಯ್ಕ ಸಭೆಯಲ್ಲಿ ತಿಳಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ಶಾಂತಲಾ ನಾಯಕ, ಈ ಬಾರಿ ಉತ್ತಮ ತೊಗರಿ ಬೇಳೆ ಬಂದಿದ್ದು, ಅದನ್ನು ಪರಿಶೀಲಿಸಿ ಪೂರೈಕೆ ಮಾಡಲಾಗಿದೆ. ಆದರೆ ಪ್ರತಿ ಬಾರಿ ಬರುವ ಬೆಳೆ ಕಾಳುಗಳನ್ನು ತಿಂಗಳಿಗೆ ಸರಿಯಾಗಿ ಪೂರೈಕೆ ಮಾಡಬೇಕು. ರಾಜ್ಯದಲ್ಲಿಯೇ ಟೆಂಡರ್ ಆಗಿರುವುದರಿಂದ ನಾವು ಟೆಂಡರ್‍ದಾರರನ್ನು ಬದಲಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. ಹೀಗೆ ಕಂಡುಬಂದಲ್ಲಿ ಗ್ರಾಮ ಪಂಚಾಯಿತಿ ಗಮನಕ್ಕೆ ತರುವಂತೆ ಮಾರುತಿ ನಾಯ್ಕ ಸೂಚಿಸಿದರು.ಹೆಸ್ಕಾನಿಂದ ಯಾವುದೇ ಮುನ್ಸೂಚನೆ ಇಲ್ಲದೆ ಕಡಿತಮಾಡಲಾಗುತ್ತಿದೆ. ಈಗ ಕೇಳಿದರೆ ದುರಸ್ತಿ ಕಾರ್ಯ ಎನ್ನುವ ಉತ್ತರ ನೀಡುತ್ತಾರೆ. ಆದರೆ ಈ ಹಿಂದೆ ದುರಸ್ತಿ ಕಾರ್ಯವನ್ನು ಸರಿಯಾಗಿ ಮಾಡದ ಕಾಣ ಇಂತ ಪರಿಸ್ಥಿತಿ ತಲೆದೂರುತ್ತಿದೆ. ಇದಕ್ಕೆ ಅಧಿಕಾರಿಗಳೆ ಹೊಣೆ ಎಂದು ಕೆಲ ಸದಸ್ಯರು ಸಭೆಯಲ್ಲಿ ದೂರಿದರು. ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಬಿ.ಯಡೂರ್ಕರ್ ಮಾತನಾಡಿ, `ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯಿರುವುದರಿಂದ ವಿದ್ಯುತ್ ಕಡಿತವಾಗುತ್ತಿದೆ. ಈಗಾಗಲೇ ಹಲವು ಕಂಬಗಳು ಮುರಿದಿದ್ದು, ಅನೇಕ ಟ್ರಾನ್ಸ್‍ಫಾರ್ಮರ್‍ಗಳು ಸುಟ್ಟುಹೋಗಿವೆ. ಕಾರವಾರ ತಾಲ್ಲೂಕಿನಲ್ಲಿಯೇ 78 ಕಂಬಗಳು ಮುರಿದಿತ್ತು. ಅದರಲ್ಲಿ 48 ಕಂಬಗಳನ್ನು ಬದಲಿಸಲಾಗಿದೆ. ಎಲ್ಲ ಗ್ರಾಮಗಳಿಗೂ ವಿದ್ಯುತ್ ಸರಬರಾಜು ಆಗುತ್ತಿದೆ. ಆದರೆ ಕುಚೇಗಾರ್‍ನಲ್ಲಿ 7 ಕಂಬ ಬಿದ್ದಿದ್ದು, ಶೀಘ್ರ ಬದಲಿ ಕಾರ್ಯ ನಡೆಯಲಿದೆ’ ಎಂದು ತಿಳಿಸಿದರು.ಮುಡಗೇರಿ, ದೇವಳಮಕ್ಕಿ, ಕಿನ್ನರ ಗ್ರಾಮದ ಪಶು ಆಸ್ಪತ್ರೆಗಳಲ್ಲಿ ಇದ್ದ ಅಧಿಕಾರಿಗಳು ವರ್ಗಾವಣೆಯಾಗಲಿದ್ದಾರೆ. ಅವರಿಗೆ ವರ್ಗಾವಣೆ ನೀಡದೇ ಇರಲು ನಮ್ಮ ಇಲಾಖೆಯಿಂದ ಸಾಧ್ಯವಿಲ್ಲ. ಅವರ ಹುದ್ದೆಗೆ ಯಾರೂ ಕೂಡ ಈವರೆಗೆ ಭರ್ತಿಯಾಗಿ ಆದೇಶ ಬಂದಿಲ್ಲ. ಹೀಗಾಗಿ 2 ಆಸ್ಪತ್ರೆಗಳು ಅಧಿಕಾರಿಗಳು ಇಲ್ಲದೇ ಮುಚ್ಚಲಿವೆ. ಬಂದವರೆಲ್ಲರೂ ವರ್ಗ ಆಗುತ್ತಿದ್ದರೆ ಇಲಾಖೆಯ ನಿರ್ವಹಣೆ ಕಷ್ಟ ಎಂದು ಪಶುಸಂಗೋಪನೆ ಇಲಾಖೆಯ ಅಧಿಕಾರಿ ತಿಳಿಸಿದರು. ಈ ಬಗ್ಗೆ ಸಭೆಯಲ್ಲಿ ಠರಾವು ಮಾಡಿ, ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಯವರನ್ನು ಆಗ್ರಹಿಸುತ್ತೇವೆ ಎಂದು ಅಧ್ಯಕ್ಷೆ ಪ್ರಮೀಳಾ ನಾಯ್ಕ ಹೇಳಿದರು. ಮುಡಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಿರುವ ಅಂಗನವಾಡಿ ಕಟ್ಟಡಕ್ಕೆ ಸ್ಲ್ಯಾಬ್ ಹಾಕಿದ್ದು ಆದರೆ ನೀರನ್ನು ಹಾಕಿಲ್ಲ. ಇದರಿಂದ ಛಾವಣಿ ಕುಸಿಯುವ ಆತಂಕದಲ್ಲಿ ಪಾಲಕರು ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲು ಹಿಂಜರಿಯುತ್ತಿರುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಸದಸ್ಯ ಸುರೇಂದ್ರ ಗಾಂವಕರ್ ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಅಧಿಕಾರಿ ಸದ್ಯಕ್ಕೆ ಛಾವಣಿ 2 ವರ್ಷಗಳ ವರೆಗೆ ಕುಸಿಯುವುದಿಲ್ಲ ಎಂಬ ಗ್ಯಾರಂಟಿ ಇದೆ ಎಂದರು. ಇದರಿಂದ ಆಕ್ರೋಶಗೊಂಡ ಸುರೇಂದ್ರ ಗಾಂವಕರ ಕಟ್ಟಡವೊಂದು ನಿರ್ಮಾಣಗೊಂಡರೆ ಅದಕ್ಕೆ 2 ವರ್ಷ ಗ್ಯಾರಂಟಿಯೆಂದರೆ ಅದು ಯಾವ ಲೆಕ್ಕದಲ್ಲಿ ನಿರ್ಮಾಣವಾಗಿದೆ. ಕನಿಷ್ಟ 40 ವರ್ಷ ಬಾಳಿಕೆ ಬರಬೇಕಾದ ಕಟ್ಟಡ 2 ವರ್ಷದಲ್ಲಿ ಕೆಡವಿ ನಷ್ಟ ಉಂಟು ಮಾಡುವುದೇ ಎಂದು ಪ್ರಶ್ನಿಸಿದರು. ಕಾಮಗಾರಿಯ ಗುತ್ತಿಗೆ ಪಡೆದ ಭೂಸೇನಾ ನಿಗಮಕ್ಕೆ ತಿಳಿಸಿ ಹೊಸ ಛಾವಣಿಯನ್ನು ನಿರ್ಮಿಸಿ ಕೊಡಲು ಸೂಚಿಸುವಂತೆ ಆಗ್ರಹಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗೌಡ ಇದ್ದರು.
Leave a Comment