ಕಾರವಾರ:
ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಬದಲು ಬಡವರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲಹೆ ನೀಡಿದರು.
ಬುಧವಾರ ಉತ್ತರ ಕನ್ನಡ ಜಿಲ್ಲಾ ಪ್ರವಾಸ ನಡೆಸಿದ ಅವರು, ಕಾರವಾರದಲ್ಲಿ ಜಿಲ್ಲಾಧಿಕಾರಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಅವರಿಂದ ವಿವಿಧ ಮಾಹಿತಿ ಪಡೆದ ನಂತರ ಮಾದ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಬಡವರಿಗೆ ನಿವೇಶನ ಹಾಗೂ ಮನೆ ನೀಡುವದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ ಕಾರವಾರದಲ್ಲಿ ಒಬ್ಬರಿಗೂ ಈ ಯೋಜನೆಯ ಲಾಭ ಸಿಕ್ಕಿಲ್ಲ. ವಿದ್ಯಾಸಿರಿ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವದಾಗಿ ಸರ್ಕಾರ ಸಾರುತ್ತಿದ್ದು, ಇದರ ಪ್ರಯೋಜನ ಕೂಡ ಯಾರೊಬ್ಬರಿಗೂ ಸಿಕ್ಕಿಲ್ಲ. ನಿವೇಶನ ಇಲ್ಲದ ಜನ ಬೀದಿಯಲ್ಲಿ ದಿನ ಕಳೆಯುತ್ತಿದ್ದಾರೆ. ಹಾಸ್ಟೇಲ್ನಲ್ಲಿ ಜಾಗ ಸಿಗದ ವಿದ್ಯಾರ್ಥಿಗಳು ವಿದ್ಯಾಸಿರಿ ಯೋಜನೆಯೂ ಲಭ್ಯವಾಗದೇ ಪರದಾಡುತ್ತಿದ್ದಾರೆ. ಶಿಕ್ಷಣ ಇಲಾಖೆಯಿಂದ ಮಕ್ಕಳಿಗೆ ಲ್ಯಾಪಟಾಪ್ ನೀಡುವ ಯೋಜನೆಯೂ ಗೊಂದಲದಲ್ಲಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಹಿಂದುಳಿದವರ ವಿರೋಧಿ ಸರ್ಕಾರವಾಗಿದ್ದು, ಬಡವರ ಕುರಿತು ಕನಿಷ್ಟ ಕಾಳಜಿಯನ್ನು ಹೊಂದಿಲ್ಲ ಎಂದು ಆರೋಪಿಸಿದರು.
ಕುಡಿಯುವ ನೀರಿನ ಯೋಜನೆ, ಗ್ಯಾಸ್ ವಿತರಿಸುವ ಯೋಜನೆ ಸೇರಿದಂತೆ ಬಹುತೇಕ ಯೋಜನೆಗಳು ಹಳ್ಳ ಹಿಡಿದಿವೆ. ಕಾಂಗ್ರೆಸ್ ಸರ್ಕಾರ ಭೃಷ್ಠಾಚಾರದಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದರು. ಇಂದನ ಸಚಿವ ಡಿ.ಕೆ ಶಿವಕುಮಾರ ರಾಜಿನಾಮೆ ನೀಡಬೇಕು. ಮುಖ್ಯಮಂತ್ರಿಗಳು ಅವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ ಸರ್ಕಾರ ತನ್ನೊಳಗಿನ ದೋಷ ಮುಚ್ಚಿಕೊಳ್ಳಲು ಬಿಜೆಪಿ ವಿರುದ್ದ ಆರೋಪ ಮಾಡುತ್ತಿದೆ ಎಂದರು. ಇಂದಿರಾ ಕ್ಯಾಂಟಿನ್ ಯೋಜನೆಯನ್ನು ಸ್ವಾಗತಿಸಿದ ಅವರು, ಕ್ಯಾಂಟಿನ್ ಸೌಲಭ್ಯ ಎಲ್ಲರಿಗೂ ಸಿಗಬೇಕು. ಉಪ್ಪಿನಕಾಯಿ ಬಡಿಸಿದ ರೀತಿ ಅನ್ನ ಬಡಿಸದೇ ಬಡವರಿಗೆ ಹೊಟ್ಟೆತುಂಬ ಊಟ ಕೊಡಬೇಕು ಎಂದರು.
**********************
ಕಾಂಗ್ರೆಸಿಗರಲ್ಲಿರುವ ನೋಟು ಮುದ್ರಿಸುವ ಯಂತ್ರ!
ನಮ್ಮ ಮನೆಯಲ್ಲಿ ನೋಟು ಎಣಿಸುವ ಯಂತ್ರ ಇದೆ ಎಂದು ವಿರೋಧ ಪಕ್ಷದವರು ಆರೋಪ ಮಾಡಿದ್ದು, ತಮ್ಮಲ್ಲಿ ನೋಟು ಎಣಿಸುವ ಯಂತ್ರ ಇರುವದು ಸತ್ಯ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು. ನಾನು ಒಬ್ಬ ವ್ಯಾಪಾರಿಯಾಗಿದ್ದು ನನಗೆ ನೋಟು ಎಣಿಸುವ ಯಂತ್ರ ಅಗತ್ಯವಿದೆ. ನನ್ನ ಬಳಿ ಇರುವದು ನೋಟು ಎಣಿಸುವ ಯಂತ್ರವೇ ಹೊರತು ನೋಟು ಮುದ್ರಿಸುವ ಯಂತ್ರವಲ್ಲ. ಕಾಂಗ್ರೆಸಿಗರ ಬಳಿ ನೋಟು ಮುದ್ರಿಸುವ ಯಂತ್ರವೂ ಇರಬಹುದು ಎಂದರು.
Leave a Comment