ಕಾರವಾರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಮತ್ತು ಅಧಿಕಾರಿಗಳ ಸಂಘಟನೆಗಳ ಒಕ್ಕೂಟ ಕರೆ ನೀಡಿದ ಮುಷ್ಕರಕ್ಕೆ ಇಲ್ಲಿನ ಬ್ಯಾಂಕ್ ಸಿಬ್ಬಂದಿ ಬೆಂಬಲ ನೀಡಿದ್ದಾರೆ.
ಮುಷ್ಕರದ ಅಂಗವಾಗಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ನೇತೃತ್ವದಲ್ಲಿ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಛೇರಿ ಎದುರು ಉದ್ಯೋಗಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು. ಜನ ವಿರೋಧಿ ಬ್ಯಾಂಕಿಂಗ್ ಸುಧಾರಣಾ ನೀತಿ ಕೈ ಬಿಡಬೆಕು. ಕಾರ್ಪೋರೇಟ್ಗಳ ಕೆಟ್ಟ ಸಾಲಗಳನ್ನು ಮನ್ನಾ ಮಾಡುವ ಬದಲು ಉದ್ದೇಶಪೂರ್ವಕ ಸುಸ್ತಿದಾರರಾದ ಶ್ರೀಮಂತ ಕೈಗಾರಿಕೋದ್ಯಮಿಗಳ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದಲ್ಲದೇ ಬ್ಯಾಂಕ್ ಶುಲ್ಕಗಳ ಎರಿಕೆ ಮಾಡಬಾರದು. ಖಾಯಂ ನೌಕರರ ನೇಮಕಾತಿ ನಡೆಯಬೇಕು. ಗ್ರ್ಯಾಚುಯಿಟಿ ಮೇಲಿನ ಮಿತಿ ಜಾಸ್ತಿ ಮಾಡಿ ಆದಾಯಕರ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ನೌಕರರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಾಸುದೇವ ಶೇಟ್, ಜಿಲ್ಲಾ ಸಂಘದ ಅಧ್ಯಕ್ಷ ವಿನೋದ ಬಾಂದೇಕರ, ಪದಾಧಿಕಾರಿಗಳಾದ ವಸಂತ ಶೆಟ್ಟಿ, ಅಶೋಕ ರಾಮದುರ್ಗ, ರವಿಕಾಂತ ತಳೇಕರ, ಯಶ್ವಂತ ನಾಯ್ಕ ಇತರರಿದ್ದರು.
Leave a Comment