ಕಾರವಾರ:
ಪ್ರತಿಷ್ಟಿತ ಆದಿ ಚುಂಚನಗಿರಿ ಸಂಸ್ಥೆಯ ಆಡಳಿತ ವ್ಯಾಪ್ತಿಗೆ ಒಳಪಟ್ಟ ಎಸ್.ಜೆ ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕುಡಿದ ಅಮಲಿನಲ್ಲಿ ಹುಡುಗಿಯರಿಗೆ ಚುಡಾಯಿಸಿದಲ್ಲದೇ ಅದನ್ನು ತಡೆದ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಹೋಟೆಲನ್ನು ದ್ವಂಸಗೊಳಿಸಿದ ಘಟನೆ ರವೀಂದ್ರನಾಥ್ ಕಡಲತೀರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮಂಡ್ಯದಿಂದ ಗೋವಾ ಪ್ರವಾಸಕ್ಕೆ ಆಗಮಿಸಿದ್ದ 54 ವಿದ್ಯಾರ್ಥಿಗಳು ಹಾಗೂ 3 ಶಿಕ್ಷಕರು ದಾಂದಲೇ ನಡೆಸಿದ್ದಾರೆ. ಗಣೇಶ ಚತುರ್ಥಿ ಹಿನ್ನಲೆಯಲ್ಲಿ ರವೀಂದ್ರನಾಥ್ ಕಡಲತೀರದಲ್ಲಿರುವ ಡ್ರೈವ್ ಇನ್ ಹೋಟೆಲ್ಗೆ ರಜೆ ಇತ್ತು. ಹೀಗಿರುವಾಗ ಊಟಕ್ಕಾಗಿ ಹೋಟೆಲ್ಗೆ ಬಂದ ವಿದ್ಯಾರ್ಥಿಗಳು ಹೋಟೆಲ್ ಬಂದ್ ಇರುವದನ್ನು ತಿಳಿದು ಕುಡಿಯಲು ನೀರು ಕೇಳಿದ್ದಾರೆ. ನಂತರ ತಾವೇ ಅಡುಗೆ ಮಾಡಿಕೊಳ್ಳುವದಾಗಿ ತಿಳಿಸಿ ಹೋಟೆಲ್ ಸಿಬ್ಬಂದಿಯಿಂದ ಅಗತ್ಯವಿರುವ ಪಾತ್ರೆಗಳನ್ನು ಪಡೆದಿದ್ದಾರೆ. ಇದಾದ ನಂತರ ಕಡಲತೀರದಲ್ಲಿ ವಾಯು ವಿಹಾರಕ್ಕೆ ಬಂದಿದ್ದ ಯುವತಿಯೊಬ್ಬರ ಮೇಲೆ ವಿದ್ಯಾರ್ಥಿಗಳ ಗುಂಪು ಮುಗಿ ಬಿದ್ದಿದ್ದು, ಇದನ್ನು ಸಿಸಿ ಕ್ಯಾಮರಾ ಮೂಲಕ ಗಮನಿಸಿದ ಹೊಟೇಲ್ ಸಿಬ್ಬಂದಿ ವಿದ್ಯಾರ್ಥಿಗಳನ್ನು ತಡೆದಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳ ತಂಡ ಶಿಕ್ಷಕರ ಪ್ರಚೋದನೆ ಮೇರೆಗೆ ಹೋಟೆಲ್ ಮೇಲೆ ದಾಳಿ ನಡೆಸಿದರು. ಪೀಠೋಪಕರಣ ಹಾಗೂ ಗಾಜುಗಳನ್ನು ಒಡೆದು ದ್ವಂಸ ಮಾಡಿದರು.
* ಗೋಕರ್ಣದ ಬದಲು ಗೋವಾಗೆ ಬಂದರು!
ಈ ವಿದ್ಯಾರ್ಥಿಗಳೆಲ್ಲರೂ ಉಡುಪಿ ಪ್ರವಾಸ ಮುಗಿಸಿ ಗೋಕರ್ಣಕ್ಕೆ ತೆರಳಬೇಕಿತ್ತು. ಆದರೆ, ಗೋವಾಗೆ ತೆರಳಿದರು. ಮಂಡ್ಯದಿಂದ ಹೊರಡುವಾಗ ಉಡುಪಿ ಮೂಲಕ ಗೋಕರ್ಣ, ಮುರುಡೇಶ್ವರ ಮೊದಲಾದ ಪುಣ್ಯಕ್ಷೇತ್ರ ದರ್ಶನ ಹಾಗೂ ಅದ್ಯಯನಕ್ಕಾಗಿ ಕೈಗಾರಿಕೆಗಳನ್ನು ಭೇಟಿ ಮಾಡುವ ಉದ್ದೇಶ ಹೊಂದಿದ್ದ ವಿದ್ಯಾರ್ಥಿಗಳು, ದಾರಿಮದ್ಯೆ ದಿಕ್ಕು ಬದಲಿಸಿದರು. ಶಿಕ್ಷಕರು ಕೂಡ ಗೋಕರ್ಣದ ಬದಲಾಗಿ ಗೋವಾಗೆ ತೆರಳುವಂತೆ ಚಾಲಕನಿಗೆ ಸೂಚಿಸಿದ ಕಾರಣ ಬಸ್ ಗೋವಾ ಚಲಿಸಿತು. ಗೋವಾ ಪ್ರವಾಸ ಮುಗಿಸಿ ಗೋಕರ್ಣದಲ್ಲಿ ರಾತ್ರಿ ಕಳೆಯುವ ಬಗ್ಗೆ ಯೋಜನೆ ಬದಲಿಸಿದ್ದರು. ಗೋಕರ್ಣದ ಬದಲು ಗೋವಾಗೆ ಬಸ್ ತೆರಳಿದ ಬಗ್ಗೆ ಕಾಲೇಜು ಪ್ರಾಚಾರ್ಯ ಟಿ.ಗಿರಿಯಣ್ಣನವರಿಗೆ ತಿಳಿದಿಲ್ಲ. ಪ್ರವಾಸಕ್ಕೆ ಆಗಮಿಸಿದ್ದ ತಂಡದಲ್ಲಿ ಒಬ್ಬ ಮಾತ್ರ ವಿದ್ಯಾರ್ಥಿನಿಯಿದ್ದು, ದೂರದೂರಿನ ಪ್ರವಾಸಕ್ಕೆ ಪುರುಷ ಶಿಕ್ಷಕ ಹಾಗೂ ವಿದ್ಯಾರ್ಥಿಗಳೊಡನೆ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಕಳುಹಿಸಿದಕ್ಕಾಗಿ ಆಡಳಿತ ಮಂಡಳಿ ವಿರುದ್ದ ಅಸಮಧಾನದ ಮಾತುಗಳು ವ್ಯಕ್ತವಾಗಿದೆ.
* ಗೋವಾದಲ್ಲಿಯೂ ದಾಂದಲೆ
ಗೋವಾದ ಕಾಣಕೋಣ ಕಡಲ ತೀರದಲ್ಲಿಯೂ ಈ ವಿದ್ಯಾರ್ಥಿಗಳು ದಾಂದಲೆ ನಡೆಸಿದ್ದಾರೆ. ಅಲ್ಲಿ ಕುಡಿದು ಕುಪ್ಪಳಿಸಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ವಾಹನ ಚಾಲಕನೊಂದಿಗೂ ಅಸಭ್ಯವಾಗಿ ವರ್ತಿಸಿದ್ದಾರೆ. ಗೋವಾದಿಂದ ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ರಾಜ್ಯಕ್ಕೆ ತರಲು ವಿರೋಧಿಸಿದ ಚಾಲಕನನ್ನು ವಿದ್ಯಾರ್ಥಿಗಳು ನಿಂದಿಸಿದ್ದಾರೆ. ಇದಾದ ನಂತರ ಕಾರವಾರ ಕಡಲತೀರಕ್ಕೆ ಬಂದ ವಿದ್ಯಾರ್ಥಿಗಳು, ಅಡುಗೆ ಮಾಡಿ ಊಟ ಮಾಡಿದ್ದಾರೆ. ಈ ವೇಳೆ ವಾಯು ವಿಹಾರಕ್ಕೆ ಬಂದಿದ್ದ ಯುವತಿಯನ್ನು ಚುಡಾಯಿಸಿದ್ದು, ಅದನ್ನು ಡ್ರೈವ್ ಇನ್ ಹೋಟೆಲ್ ಸಿಬ್ಬಂದಿ ತಡೆದಿದ್ದಾರೆ. ಊಟ ಮುಗಿದ ಮೇಲೆ ಮುಂದಿನ ಪ್ರವಾಸಕ್ಕಾಗಿ ಹೊರಟಿದ್ದ ಬಸ್ಸನ್ನು ಹಿಂದಕ್ಕೆ ತಿರುಗಿಸುವಂತೆ ಒತ್ತಾಯಿಸಿ, ಹೋಟೆಲ್ ಮೇಲೆ ವಿದ್ಯಾರ್ಥಿಗಳು ದಾಳಿ ನಡೆಸಿದ್ದಾರೆ. ಘಟನೆ ವೇಳೆ ಹೊಟೇಲ್ ಮಾಲಿಕ, ಬಿಜೆಪಿ ಮುಖಂಡ ಗಣಪತಿ ಉಳ್ವೇಕರ್ ಪುತ್ರ ಅವಿನಾಶ್ ಉಳ್ವೇಕರ್ ಮೇಲೆ ಹಲ್ಲೆ ನಡೆದಿದೆ. ರಾಡ್ನಿಂದ ಅವಿನಾಶ್ ಉಳ್ವೇಕರ್ ತಲೆಗೆ ಹೊಡೆಯಲಾಗಿದೆ. ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಎಲ್ಲ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Leave a Comment