ಕಾರವಾರ:
ಕೃತಕ ಗರ್ಭಧಾರಣೆ ಮಾಡಿಸಿದ ಹೈನುರಾಸುಗಳಲ್ಲಿ ಹಾಲಿನ ಪ್ರಮಾಣ ಕಡಿಮೆಯಾಗುತ್ತಿರುವ ಬಗ್ಗೆ ತಜ್ಞರಿಂದ ಅಧ್ಯಯನ ನಡೆಸುವಂತೆ ಸರ್ಕಾರ ಪ್ರಧಾನ ಕಾರ್ಯದರ್ಶಿ ರಾಜ್ಕುಮಾರ್ ಕತ್ರಿ ಪಶು ವೈದ್ಯ ಸೇವಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ದೇಶಿ ಜಾನುವಾರುಗಳಿಗೆ ಕೃತಕ ಗರ್ಭಧಾರಣೆ ಮೂಲಕ ಹೈನುರಾಸುಗಳ ತಳಿ ವೃದ್ಧಿಸಲಾಗಿದೆ. ಇದರಿಂದ ಹೈನುರಾಸುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿರುವ ಹಾಗೂ ಹೆಚ್ಚು ಹಾಲು ಕೊಡುವ ತಳಿ ಉತ್ಪತ್ತಿಯಾಗುತ್ತದೆಯಾದರೂ ಆನಂತರ ಹಾಲು ಇಳುವರಿ ಕಡಿಮೆಯಾಗುತ್ತಿದೆ. ಈ ಸಂಬಂಧ ಪಶುವೈದ್ಯಕೀಯ ವಿಶ್ವವಿದ್ಯಾಲಯದ ತಜ್ಞರಿಂದ ಅಧ್ಯಯನ ನಡೆಸಿ ಎರಡು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು. ಪಶು ಪಾಲನಾ ಇಲಾಖೆಯಲ್ಲಿ ವೈದ್ಯರ ಕೊರತೆ ಇದ್ದು ಶೀಘ್ರವೇ ನೇರ ನೇಮಕಾತಿ ಮೂಲಕ ಖಾಲಿ ಹುದ್ದೆ ಭರ್ತಿ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹೆಚ್ಚಿಸಿ ಹಾಲು ಹೆಚ್ಚು ಉತ್ಪಾದಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಹಾಲಿನ ಪ್ರೋತ್ಸಾಹ ಧನ ಹೆಚ್ಚು ಫಲನುಭವಿಗಳಿಗೆ ಸಿಗುವಂತೆ ಮಾಡಬೇಕು ಎಂದರು.
ಜಾನುವಾರಗಳಲ್ಲಿ ಕಾಲುಬಾಯಿ ರೋಗ ಪೂರ್ಣ ಪ್ರಮಾಣದಲ್ಲಿ ತಡೆಗಟ್ಟುವ ಮೂಲಕ ದೇಶದಲ್ಲಿ ಕಾಲುಬಾಯಿ ರೋಗ ಮುಕ್ತ ರಾಜ್ಯವನ್ನಾಗಿ ಮಾಡಬೇಕಿದೆ. ಕಾಲುಬಾಯಿ ರೋಗ ಲಸಿಕೆ ಪ್ರಕ್ರಿಯೆ ಶೇ.100 ಪ್ರಗತಿ ಆಗಬೇಕು ಎಂದು ಸಂಕಲ್ಪ ಮಾಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಮೀನುಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಅವರು, ಸರ್ಕಾರರ ಗುರಿ ಸಾಧನೆ ಅಂಶಗಳನ್ನು ಹೊರತುಪಡಿಸಿ ಸರ್ಕಾರಿ ನೌಕರರು ತಮ್ಮ ಅಧಿಕಾರಾವಧಿಯಲ್ಲಿ ಎಷ್ಟು ನಿಜವಾದ ಫಲಾನುಭವಿಗಳಿಗೆ ಸರ್ಕಾರದ ಪ್ರಯೋಜನಗಳನ್ನು ವತಲುಪಿಸುವದು ಮುಖ್ಯ. ಅಂತಹ ಪ್ರಾಮಾಣಿಕ ಕಾರ್ಯಕ್ರಮಗಳ ಅನುಷ್ಠಾನ ಮಾಡಿದಾಗ ಮಾತ್ರ ಸರ್ಕಾರದ ಉದ್ದೇಶವೂ ಈಡೇರುತ್ತದೆ ಎಂದರು. ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ ಲಾಭ ಎಷ್ಟು ಫಲಾನುಭವಿಗಳಿಗೆ ಸಿಕ್ಕಿದೆ. ಯೋಜನೆ ಲಾಭ ಪಡೆದವರ ಆರ್ಥಿಕ ಬದುಕು ಸುಧಾರಣೆಯಾಗಿದೆಯೇ ಎಂಬ ಬಗ್ಗೆ ಸಾಧಕರ ಪಟ್ಟಿಯನ್ನು ನೀಡುವಂತೆ ಸೂಚಿಸಿದರು.
ಮೀನು ಕೃಷಿಕರಿಗೆ ಮನೆ ನಿರ್ಮಿಸಿಕೊಡುವ ಯೋಜನೆಗಳಲ್ಲಿ ಎಷ್ಟು ಪ್ರಗತಿ ಸಾಧಿಸಲಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ವಿಳಂಬಕ್ಕೆ ಕಾರಣಗಳೇನು ಎಂಬ ಬಗ್ಗೆ ವಿವರಣೆಯ ಮಾಹಿತಿ ಒದಗಿಸುವಂತೆ ಅವರು ತಿಳಿಸಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಸುಬ್ಬರಾಯ ಭಟ್ಟ, ಯಲ್ಲಾಪುರದ ಪಾಲಿಕ್ಲಿನಿಕ್ ಉಪ ನಿರ್ದೇಶಕ ಗೋವಿಂದ ಭಟ್, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ದೊಡ್ಡಮನಿ ಇತರರಿದ್ದರು.
Leave a Comment