ಕಾರವಾರ: ಖಾಸಗಿ ಇಂಜಿನಿಯರಿಂಗ್ ಕಾಲೇಜು ಉಳಿಸುವ ಪ್ರಯತ್ನದಲ್ಲಿ ನಡೆದ ರಾಜಕೀಯ ಒತ್ತಡಕ್ಕೆ ಸಿಲುಕಿದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಅವಸಾನದತ್ತ ಸಾಗಿದೆ.
ಮಾಜಾಳಿಯಲ್ಲಿರುವ ಶಾಸಕ ಸತೀಶ್ ಸೈಲ್ ಮಾಲಿಕತ್ವದ ಇಂಜಿನಿಯರಿಂಗ್ ಕಾಲೇಜು ಉಳಿಸಲು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿಗೆ ದೊರಕಬೇಕಿದ್ದ ಮೂಲಭೂತ ಸೌಕರ್ಯಗಳು ಸರಿಯಾಗಿ ದೊರೆಯುತ್ತಿಲ್ಲ. ಕಾಲೇಜು ನಿರ್ಮಾಣ ಕೆಲಸವೂ ತೀರಾ ಮಂದಗತಿ ಸಾಗಿ ಅಂತೂ ಮುಕ್ತಾಯಗೊಂಡಿದೆ. ಸರ್ಕಾರದಿಂದ ಇಂಜಿನಿಯರಿಂಗ್ ಕಾಲೇಜಿಗೆ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾದರೂ ಕಾಲೇಜು ಸ್ಥಳಾಂತರವಾಗಿಲ್ಲ. ಸರ್ಕಾರಿ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಹಾಳುಬಿದ್ದ ಕಟ್ಟಡದಲ್ಲಿಯೇ ತರಗತಿಗಳನ್ನು ಎದುರಿಸುವ ಪರಿಸ್ಥಿತಿ ಇದೆ. ಇದಲ್ಲದೇ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ 252 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬೇಕಾಗಿದ್ದರೂ ಅದನ್ನು ಉಲ್ಲಂಗಿಸಿ 133 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಉಳಿದ ವಿದ್ಯಾರ್ಥಿಗಳಿಗೆ ಅಧಿಕ ಹಣ ನೀಡಿ ಖಾಸಗಿ ಕಾಲೇಜು ಆಶ್ರಯಿಸುವಂತೆ ಪ್ರಚೋದಿಸಲಾಗುತ್ತಿದೆ. ಕರ್ನಾಟಕ ಸರ್ಕಾರವೂ 15 ಅಗಷ್ಟ್ 2016ರ ಒಳಗೆ ಉಳಿದ 119 ವಿದ್ಯಾರ್ಥಿಗಳ ಪ್ರವೇಶಾತಿ ಹಂಚಿಕೆ ಮಾಡುವಂತೆ ಆದೇಶಿಸಿದರೂ ಇದರ ಪಾಲನೆಯಾಗಿಲ್ಲ.
ಹಳೆಯ ಮತ್ತು ಸುರಕ್ಷಿತವಲ್ಲದ ಕೊಠಡಿಗಳಲ್ಲಿ ತರಗತಿ ನಡೆಸುವದನ್ನು ವಿದ್ಯಾರ್ಥಿಗಳು ವಿರೋಧಿಸಿದರೂ ಅವರ ಮಾತು ಕೇಳುವವರಿಲ್ಲ. ಆರ್ಥಿಕ ಲಾಭಕ್ಕಾಗಿ ರಾಜಕೀಯ ನಾಯಕರು ತಮ್ಮ ಕಾಲೇಜಿನಲ್ಲಿ ಅಧಿಕ ಪ್ರವೇಶಾತಿ ಕಲ್ಪಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಗ್ರಾಮೀಣ ಭಾಗದವರಾಗಿರುತ್ತಾರೆ. ದುಬಾರಿ ಶುಲ್ಕ ತೆತ್ತು ಖಾಸಗಿ ಕಾಲೇಜು ಪ್ರವೇಶ ಪಡೆಯಲು ಅವರಿಗೆ ಕಷ್ಟವಾಗಿದ್ದು, ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಕೂಡಲೇ ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು. ಜೊತೆಗೆ ಶೀಘ್ರದಲ್ಲಿ ಉಳಿದಿರುವ ಪ್ರವೇಶಾತಿಯನ್ನು ಕಲ್ಪಿಸಿಕೊಡಬೇಕು ಎಂದು ವಿದ್ಯಾರ್ಥಿಗಳು ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ ನೇತ್ರತ್ವದಲ್ಲಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಒತ್ತಾಯಿಸಿದರು.
Leave a Comment