ಹಳಿಯಾಳ ;
ಸ್ತ್ರೀಯರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಪ್ರಮುಖವಾಗಿ ರಾಜಕೀಯವಾಗಿ ಮುಂದೆ ಬರಬೇಕಾಗಿದೆ. ಸ್ರ್ತಿ ಶಕ್ತಿಯು ದೇಶದ ಅಭಿವೃದ್ದಿಗೆ ಪೂರಕವಾಗಿದ್ದು ಸರ್ಕಾರವು ಮಹಿಳೆಯರ ಶ್ರೇಯೋಭಿವೃದ್ದಿಗಾಗಿ ರೂಪಿಸಿರುವ ಹಲವಾರು ಯೋಜನೆಗಳ ಸದುಪಯೋಗ ಪಡೆದು ಸ್ತ್ರೀಯರು ಪ್ರಗತಿ ಸಾಧಿಸುವಲ್ಲಿ ದಾಪುಗಾಲು ಹಾಕಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕರೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ಪಟ್ಟಣದ ಗಿರಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿದ ಸ್ತ್ರೀ ಶಕ್ತಿ ಭವನವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಸಚಿವರು 2000 ನೇ ಸಾಲಿನಲ್ಲಿ ಹಿಂದಿನ ಯುಪಿಎ ಕಾಂಗ್ರೇಸ್ ಸರ್ಕಾರವು ಮಹಿಳೆಯರ ಸಬಲಿಕರಣಕ್ಕಾಗಿ ಹಾಗೂ ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ತ್ರೀ ಶಕ್ತಿ ಯೋಜನೆಯನ್ನೂ ಜಾರಿಗೆ ತರುವುದರ ಮೂಲಕ ಸ್ತ್ರೀಯರಿಗೆ ಪ್ರಾದ್ಯಾನತೆಯನ್ನು ನೀಡಿತ್ತು. ಅದರಂತೆ ಇಗೀರುವ ರಾಜ್ಯದ ಕಾಂಗ್ರೇಸ್ ಸರ್ಕಾರವು ಸಹ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಮೂಲಕ ಗರ್ಭಿಣಿಯರು, ಮಕ್ಕಳು ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗಾಗಿ ಹಲವಾರು ಯೋಜನೆಗಳನ್ನು ನೀಡುವುದರ ಮೂಲಕ ಅವರ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದರು.
ಮಹಿಳೆಯರು ಕೇವಲ ಅಡಿಗೆ ಮನೆಗೆ ಸೀಮಿತರಾಗದೇ ಇನ್ನಿತರ ಉದ್ಯಮ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿ ಆದಾಯದ ಮೂಲಗಳನ್ನು ನೋಡಬೇಕಾಗಿದೆ ಸ್ತ್ರೀ ಶಕ್ತಿ ಕೇಂದ್ರಗಳ ಮೂಲಕ ಸ್ವಯಂ ಉದ್ಯೋಗ, ತಯಾರಿಸಿದ ಉತ್ಪಾದನೆಗಳ ಮಾರಾಟ ಸೇರಿದಂತೆ ಇನ್ನಿತರ ಕೌಶಲ್ಯಗಳನ್ನು ಅಳವಡಿಸಿಕೊಂಡು ಅದರ ಮೂಲಕ ಹೆಚ್ಚಿನ ಆದಾಯ ಗಳಿಸಲು ಮುಂದಾಗಬೇಕು. ಸ್ವ ಉದ್ಯೋಗಗಳಿಗಾಗಿ ಉಚಿತವಾಗಿ ತರಬೇತಿ ನೀಡಲು ರುಡಸೆಟಿಯಂತಹ ಸಂಸ್ಥೆಗಳು ಅಸ್ಥಿತ್ವದಲ್ಲಿದ್ದು ಅವುಗಳ ಉಪಯೋಗ ಪಡೆಯುವಂತೆ ಸಲಹೆ ನೀಡಿದರು.
ಮಹಿಳೆಯರಿಗೆ ರಾಜ್ಯ ಸರಕಾರವು ಶೇ 50 ರಷ್ಟು ರಾಜಕೀಯ ಮೀಸಲಾತಿಯನ್ನು ನೀಡುವುದರ ಮೂಲಕ ಸ್ತ್ರೀಯರಿಗೆ ರಾಜಕೀಯ ಅಧಿಕಾರ ನೀಡಿದ್ದು ಅದರ ಸಂಪೂರ್ಣ ಉಪಯೋಗವಾಗಬೇಕಾಗಿದೆ. ಜಿಲ್ಲೆಯಲ್ಲಿ ಒಟ್ಟೂ 34 ಕೋಟಿ ರೂಗಳಷ್ಟು ಬಡ್ಡಿ ರಹಿತ ಸಾಲವನ್ನು ಸ್ತ್ರೀ ಶಕ್ತಿ ಸಂಘಗಳಿಗೆ ನೀಡುವುದರ ಮೂಲಕ ಮಹಿಳಾ ಸಬಲಿಕರಣಕ್ಕೆ ಒತ್ತು ನೀಡಲಾಗಿದ್ದು ಮಹಿಳೆಯರ ಸರ್ವಾಂಗೀಣ ಅಭಿವೃದ್ದಿಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ದೇಶಪಾಂಡೆ ಅಭಿಪ್ರಾಯಪಟ್ಟರು.
ವಿಪ ಸದಸ್ಯ ಎಸ್.ಎಲ್.ಘೋಟ್ನೆಕರ ಮಾತನಾಡಿ ಕೆಡಿಸಿಸಿ ಬ್ಯಾಂಕ್ ಅತ್ಯಂತ ಕಡಿಮೇ ಬಡ್ಡಿ ದರದಲ್ಲಿ ಮಹಿಳಾ ಸಂಘಗಳಿಗೆ ಲಕ್ಷಾಂತರ ರೂ ಸಾಲ ನೀಡಲು ಮುಂದಾಗಿದ್ದು ಇದರ ಪ್ರಯೋಜನ ಪಡೆದು ಸ್ತ್ರೀ ಶಕ್ತಿಯ ಸದಸ್ಯರು ಆರ್ಥಿಕವಾಗಿ ಸಂಪನ್ನರಾಗುವಂತೆ ಕರೆ ನೀಡಿದರು.
ಸಮಾರಂಭದಲ್ಲಿ ಪುರಸಭೆ ಅಧ್ಯಕ್ಷ ಉಮೇಶ ಬೋಳಶೆಟ್ಟಿ, ಪುರಸಭೆ ಸದಸ್ಯರಾದ ಮಾಲಾ ಬ್ರಿಗಾಂಜಾ, ಪ್ರೇಮಾ ತೊರಣಗಟ್ಟಿ, ಗಾಯಿತ್ರಿ ನೀಲಜಕರ, ಮಾಧವಿ ಬೆಳಗಾಂವಕರ, ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷೆ ಸುಧಾ ಬಾಂದೇಕರ, ತಾಪಂ ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ಸಿಡಿಪಿಓ ಶಾರದಾ ಮರಾಠೆ, ತಹಶೀಲದಾರ ವಿದ್ಯಾಧರ ಗುಳಗುಳಿ, ಮುಖ್ಯಾಧಿಕಾರಿ ಕೇಶವ ಚೌಗುಲೆ, ಎಇಇ ಆರ್.ಎಚ್.ಕುಲಕರ್ಣಿ, ಮೇಲ್ವಿಚಾರಕಿಯರಾದ ಅಂಬಿಕಾ ಕಟಕೆ, ಅಲಮಾಸ್ ನಧಾಪ್, ಅನುಸೂಯಾ ರೇಡೆಕರ , ರಾಜೇಶ್ವರಿ ಗವಿಮಠ, ರಜೀಯಾ ಪಿಂಜಾರ ಇದ್ದರು.
Leave a Comment