ಹಳಿಯಾಳ: ಮರಾಠಾ ಸಮುದಾಯವನ್ನು ಪ್ರವರ್ಗ 3ಬ ದಿಂದ ಪ್ರತ್ಯೇಕಗೊಳಿಸಿ ಪ್ರವರ್ಗ 2ಅ ದಲ್ಲಿ ಸೇರ್ಪಡೆಗೊಳಿಸಬೇಕು ಹಾಗೂ ಸಮಾಜದ ಇತರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 2ನೇ ಬಾರಿಗೆ ಹಳಿಯಾಳದಲ್ಲಿ ನಡೆದ “ಏಕ ಮರಾಠಾ ಲಾಖ್ ಮರಾಠಾ ಕ್ರಾಂತಿ (ಮೂಕ) ಮೋರ್ಚಾ ಕಾರ್ಯಕ್ರಮದಲ್ಲಿ ಸಾವಿರಾರು ಮರಾಠಾರು ಭಾಗವಹಿಸಿ ಸರ್ಕಾರದ ಗಮನ ಸೆಳೆದರು.
ಮೀಸಲಾತಿಗಾಗಿ ಆಗ್ರಹಿಸಿ ಈ ಹಿಂದೆ ಹಳಿಯಾಳದಲ್ಲಿ ಫೆ.20 ರಂದು 70ಸಾವಿರಕ್ಕೂ ಅಧಿಕ ಮರಾಠಾರು ಸೇರಿ ವಿರಾಟ ಶಕ್ತಿ ಪ್ರದರ್ಶಿಸಿದ್ದರು ಆದರೇ ಸರ್ಕಾರ ಈವರೆಗೆ ತಮ್ಮ ಬೇಡಿಕೆ ಈಡೇರಿಸದ ಕಾರಣ ಹಳಿಯಾಳ ತಾಲೂಕಾ ಮಟ್ಟದ ಪ್ರತಿಭಟನೆ ಕಾರ್ಯಕ್ರಮ ಮರಾಠಾ ಕ್ರಾಂತಿ ಮೌನ ಮೋರ್ಚಾ ಸಕಲ ಮರಾಠಾ ಸಮಾಜ ಉತ್ತರ ಕನ್ನಡ ಜಿಲ್ಲೆ ಬ್ಯಾನರನಡಿ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ಸಂಘಟಿಸಿ ಗುರುವಾರ ಪಟ್ಟಣದ ಮರಾಠಾ ಭವನದಿಂದ ಇಲ್ಲಿಯ ಶೀವಾಜಿ ವೃತ್ತದ ವರೆಗೆ ಪ್ರತಿಭಟನಾ ಮೇರವಣಿಗೆ ನಡೆಸಿ ಸಭೆ ಸೇರಿತು.
ಎಲ್ಲರ ಕೈಯಲ್ಲೂ ಭಗವಾಧ್ವಜ, ಕೇಸರಿ ಶಾಲು, ಪೇಟಾ, ಟೊಪಿಗಳನ್ನು ತೊಟ್ಟಿದ್ದ ಜನತೆ ಪರಸ್ಪರರಲ್ಲಿ ಮಾತನಾಡದೆ, ಯಾವುದೇ ಘೊಷಣೆಗಳನ್ನು ಕೂಗದೆ ಮೌನವಾಗಿ ಮೇರವಣಿಗೆ ನಡೆಸಿದ್ದು ವಿಶೇಷವಾಗಿತ್ತು. ಮಹಿಳೆಯರು, ಯುವತಿಯರು ಸಾಂಪ್ರದಾಯಿಕ ಉಡುಗೆ, ಕೇಸರಿ ಪೇಟಾಗಳನ್ನು ತೊಟ್ಟಿದ್ದರು ಕಾರ್ಯಕ್ರಮದಲ್ಲಿ ಮರಾಠಾ ಸಮಾಜದ ಎಲ್ಲ ಶಾಲಾ ಮಕ್ಕಳು ಭಾಗವಹಿಸಿದ್ದರು.
ಶಿವಾಜಿ ವೃತ್ತದಲ್ಲಿ ಹಾಕಿದ್ದ ಭವ್ಯ ತೆರೆದ ವೇದಿಕೆಯ ಮೇಲೆ ವಿದ್ಯಾರ್ಥಿ ಗಾಯಕ ಗಣೇಶ ಬೆಳಗಾಂವಕರ ಹಾಗೂ ವಿಠ್ಠಲ ಮಹಾರಾಜರ ಸಂಗಡಿಗರಿಂದ ಶಿವಾಜಿ ಸ್ತುತಿ, ಭಜನೆ, ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಬಾಲಕಿಯರಾದ ಪಾವನಿ ಅರ್ಜುನ ಗುರವ, ಪವಿತ್ರಾ ಗಣೇಶ ಚವ್ವಾಣ, ಸಂಜನಾ ತೋರಸ್ಕರ, ಕಿರ್ತನ ದೇವರಮನೆ ಛತ್ರಪತಿ ಶಿವಾಜಿ ಮಹಾರಾಜರ ಸಾಧನೆಗಳು, ಅವರ ಧ್ಯೇಯೊದ್ದೇಶಗಳ ಕುರಿತು ಹಾಗೂ ಮರಾಠಾ ಸಮಾಜಕ್ಕೆ ಅವಶ್ಯಕವಾಗಿರುವ ಮೀಸಲಾತಿ ಕುರಿತು ಸವಿಸ್ತಾರವಾಗಿ ಮಾತನಾಡಿದರು ಅಲ್ಲದೇ ಈಗ ಮೌನವಾಗಿ ನಡೆದಿರುವ ಪ್ರತಿಭಟನೆಯನ್ನು ಸರ್ಕಾರ ಗಮನಿಸಿ ಮರಾಠಾ ಸಮಾಜದ ಬೇಡಿಕೆಗಳನ್ನು ಈಡೇರಿಸದೆ ಇದ್ದರೇ ಮುಂದಿನ ದಿನಗಳಲ್ಲಿ ಊಗ್ರ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಅವರು ವಿನಮ್ರವಾಗಿ ಎಚ್ಚರಿಕೆ ನೀಡಿದರು.
ಬಳಿಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಇವರುಗಳು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಅವರಿಗೆ ಸಲ್ಲಿಸಿದರು. ಬಳಿಕ ಪ್ರತಿಭಟನಾರ್ಥ ಶಿವಾಜಿ ವೃತ್ತದಲ್ಲಿ ಟಾಯರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮನವಿಯಲ್ಲಿ :- ಕರ್ನಾಟಕದಲ್ಲಿನ ಮರಾಠಾ ಸಮಾಜದವರು ರಾಜ್ಯದ ಮಣ್ಣಿನ ಮಕ್ಕಳಾಗಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಹಿಂದುಳಿದಿರುವ ಮರಾಠಾ ಸಮುದಾಯವನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಶಂಕರಪ್ಪನವರು ಅಧ್ಯಯನ ಮಾಡಿ ನೀಡಿದ ಶಿಫಾರಸ್ಸಿನಂತೆ ಪ್ರವರ್ಗ 3ಬ ದಿಂದ ಪ್ರತ್ಯೇಕಗೊಳಿಸಿ ಪ್ರವರ್ಗ 2ಅ ದಲ್ಲಿ ಸೇರ್ಪಡೆಗೊಳಿಸಬೇಕೆಂಬುದು ಪ್ರಮುಖ ಬೇಡಿಕೆಯಾಗಿದ್ದು ಒಂದಾನುವೇಳೆ ಸರ್ಕಾರ ನಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ ತಾಲೂಕಾ ಕಚೇರಿಗಳ ಎದುರು ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಹಾಗೂ ಮೌನವಾಗಿರುವ ಪ್ರತಿಭಟನೆ ಊಗ್ರ ಸ್ವರೂಪಕ್ಕೆ ಪರಿವರ್ತನೆ ಆಗುವ ಎಚ್ಚರಿಕೆಯನ್ನು ನೀಡಲಾಗಿದೆ.
ಈ ಮೊದಲೆ ನಿರ್ಧರಿಸಿದಂತೆ ಕಾರ್ಯಕ್ರಮದ ವೇದಿಕೆಯ ಮೇಲಾಗಲಿ ಅಥವಾ ಕರಪತ್ರಗಳಲ್ಲಾಗಲಿ ಯಾವುದೇ ಮುಖಂಡರ ಹೆಸರುಗಳನ್ನು ಪ್ರಸ್ತಾಪಿಸದೆ ಕೇವಲ ಮರಾಠಾ ಸಮಾಜದ ಹೆಸರಿನಡಿ ಕಾರ್ಯಕ್ರಮ ಸಂಘಟಿಸಿ ವಿದ್ಯಾರ್ಥಿಗಳ ಮೂಲಕ ಸರ್ಕಾರಕ್ಕೆ ಸಂದೇಶ ರಾವನಿಸುವ ಕಾರ್ಯ ಈ ಬಾರಿಯ ಪ್ರತಿಭಟನೆಯಲ್ಲೂ ಮುಂದುವರೆದಿದ್ದು ಹೊರಾಟದ ವಿಶೇಷತೆಯಾಗಿದೆ.
Leave a Comment