ಭಟ್ಕಳ: ಇಂದಿನ ದಿನಮಾನದ ಶಿಕ್ಷಣ ವ್ಯವಸ್ಥೆಯು ಅಂಕ ಗಳಿಕೆಯೇ ಶಿಕ್ಷಣದ ಧ್ಯೇಯ ಎಂಬಂತೆ ಸಾಗುತ್ತಿದೆ. ಮಗುವಿನ ವ್ಯಕ್ತಿತ್ವವನ್ನು ಸಹಜವಾಗಿ ಅರಳಿಸುವಂತಹ ಕಾರ್ಯ ಇಂದಿನ ಶಿಕ್ಷಣದಿಂದ ಆಗುತ್ತಿದೆಯೇ ಎಂಬುದನ್ನು ವಸ್ತುನಿಷ್ಠವಾಗಿ ಆತ್ಮಾವಲೋಕನ ಮಾಡುವಂತಹ ಚಿಂತನೆಯನ್ನು ಶಿಕ್ಷಕರ ದಿನಾಚರಣೆಯಂದು ನಾವು ಮಾಡಬೇಕಾಗಿದೆ ಎಂದು ಎಸ್.ಡಿ.ಎಂ. ಕಾಲೇಜಿನ ಕನ್ನಡ ವಿಭಾಗದ ಹಿರಿಯ ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ ಹೇಳಿದರು.
ಅವರು ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು. ನಂತರ ಮಾತನಾಡಿದ ಅವರು ದೀಪವೊಂದು ಆರುವ ಮುನ್ನ ಇನ್ನೊಂದು ದೀಪವನ್ನು ಬೆಳಗಿ ಸಾರ್ಥಕತೆಯನ್ನು ಪಡೆಯುವಂತೆ ಶಿಕ್ಷಕ ವೃತ್ತಿಯಲ್ಲಿ ಶಿಕ್ಷಕ ಆತ್ಮ ತೃಪ್ತಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕಿದೆ. ಬರಿಯ ಆದರ್ಶಗಳ ನೆಲೆಯಲ್ಲಿ ಯೋಚಿಸದೆ ಇಂದಿನ ವಾಸ್ತವತೆಗಳ ನೆಲೆಯಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಕೆಲಸ ಶಿಕ್ಷಕರಿಂದಾಗಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯಕ ಮಾತನಾಡಿ ಶಿಕ್ಷಕ ನಿರಂತರ ವಿದ್ಯಾರ್ಥಿಯಾಗಿದ್ದು ಅಧ್ಯಯನ ಅಧ್ಯಾಪನವನ್ನು ಮೈಗೂಡಿಸಿಕೊಳ್ಳಬೇಕೆಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.
ಬಿ.ಎಡ್. ಪ್ರಶಿಕ್ಷಣಾರ್ಥಿಗಳು ರಾಧಾಕೃಷ್ಣನ್ ರವರ ವಿಚಾರಗಳ ಕುರಿತು ಅನಿಸಿಕೆ ವ್ಯಕ್ತ ಪಡಿಸಿದರು. ಈ ಸಂದರ್ಭದಲ್ಲಿ ಭಾಷಾ ಸಂಘದಿಂದ ಪ್ರಶಿಕ್ಷಣಾರ್ಥಿಗಳಿಗಾಗಿ ಆಯೋಜಿಸಿದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾಲೇಜಿನ ಪ್ರಾಚಾರ್ಯ ಡಾ. ಆರ್.ನರಸಿಂಹ ಮೂರ್ತಿ ಸ್ವಾಗತಿಸಿದರು. ಶ್ವೇತಾ ಸಂಗಡಿಗರು ಪ್ರಾರ್ಥಿಸಿದರು. ಉಷಾ ವಂದಿಸಿದರು. ಪ್ರಶಿಕ್ಷಣಾರ್ಥಿ ಪವಿತ್ರಾ ಹೇರೂರು ಬಹುಮಾನ ವಿತರಣಾ ಕಾರ್ಯಕ್ರಮ ನಿರ್ವಹಿಸಿದರೆ ಚಂದ್ರಾವತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮಲ್ಲಿ ಉಪನ್ಯಾಸಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
Leave a Comment