ಹಳಿಯಾಳ: ಬಹುದಿನಗಳ ಬೇಡಿಕೆಯಾದ ಕಾರವಾರ ಮತ್ತು ಅಂಕೋಲಾ ಪಟ್ಟಣಗಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಉದ್ದೇಶದಿಂದ ಗಂಗಾವಳಿ ನದಿಗೆ ಬ್ಯಾರೇಜನ್ನು ನಿರ್ಮಿಸಲು ರೂ. 158.62 ಕೋಟಿ ವೆಚ್ಚದ ವಿಶೇಷ ಯೋಜನೆಗೆ ಬುಧವಾರ ದಿ.13.09.2017 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮದವರಿಗೆ ಪತ್ರಿಕಾ ಹೇಳಿಕೆ ಹೊರಡಿಸಿರುವ ಅವರು ಮುಖ್ಯವಾಗಿ ಬೇಸಿಗೆಯಲ್ಲಿ ಕರಾವಳಿ ಭಾಗದ ನದಿಗಳಲ್ಲಿ ನೀರಿನ ಪ್ರಮಾಣ ತೀವ್ರ ಇಳಿಮುಖವಾಗಿ ಪ್ರತಿವರ್ಷವೂ ಕಾರವಾರ, ಅಂಕೋಲಾ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿತ್ತು. ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯು ಗಂಗಾವಳಿ ನದಿಗೆ ಬ್ಯಾರೇಜನ್ನು ನಿರ್ಮಿಸಿ ನೀರಿನ ಅಭಾವವಿರುವ ಈ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ರೂ. 158.62 ಕೋಟಿ ವೆಚ್ಚದ ವಿಶೇಷ ಯೋಜನೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಸದರಿ ಯೋಜನೆಯ ಜಾರಿಗೆ ಹಸಿರು ನಿಶಾನೆ ನೀಡಲಾಗಿದೆ ಎಂದಿದ್ದಾರೆ.
ಈ ಯೋಜನೆ ಜಾರಿಗೊಂಡಲ್ಲಿ ಕಾರವಾರ, ಅಂಕೋಲಾ ಪಟ್ಟಣಗಳಲ್ಲದೇ ಸುತ್ತಮುತ್ತಲಿನ ಅಮದಳ್ಳಿ, ಚೆÀಂಡಿಯಾ, ತೋಡೂರು, ಅರ್ಗಾ, ಬೇಲೇಕೇರಿ, ಅವರ್ಸಾ, ಶಿರಕುಳಿ, ಅಗಸೂರು, ವಂದಿಗೆ-ಶೆಟಗೇರಿ, ಬೊಬ್ರುವಾಡ, ಹಾರವಾಡ, ಬೆಳಂಬಾರ, ಹಟ್ಟಿಕೇರಿ ಮುಂತಾದ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಪ್ರದೇಶಗಳ ನೀರಿನ ಸಮಸ್ಯೆ ಪರಿಹರಿಸಲು ಸಾಧ್ಯವಾಗುತ್ತದೆ ಎಂದಿರುವ ದೇಶಪಾಂಡೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಲಸಂಪನ್ಮೂಲ ಇಲಾಖೆಗಳೂ ಈ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ಸೂಚಿಸಿವೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ವಿವರಿಸಿದ್ದಾರೆ.
Leave a Comment