ಕಾರವಾರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆ ಕೋಡಿಭಾಗದಲ್ಲಿ ಅಂಡರ್ಪಾಸ್ ನಿರ್ಮಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಜನ ಗುರುವಾರ ದಿಡೀರ್ ಆಗಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಭದ್ರಾ ಹೋಟೆಲ್ ಮುಂಭಾಗ ನಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕೆಲಕ್ಕೆ ತಡೆಯೊಡ್ಡಿದ ಪ್ರತಿಭಟನಾಕಾರರು, ಅಂಡರ್ಪಾಸ್ ನಿರ್ಮಾಣ ನಡೆಯುವವರೆಗೂ ದರಣಿ ನಡೆಸುವದಾಗಿ ಎಚ್ಚರಿಸಿದರು. ಪಂಚರವಾಡ ಮತ್ತು ಸಾಯಿಕಟ್ಟಾ ಮಾರ್ಗವಾಗಿ ಅಂಡರ್ಪಾಸ್ ರಸ್ತೆ ನಿರ್ಮಿಸಬೇಕು. ಈ ಭಾಗದಲ್ಲಿ ಹೆದ್ದಾರಿ ಅಗಲೀಕರಣ ಮಾಡಿದರೆ ಶಾಲೆ ಮಕ್ಕಳಿಗೆ ತೊಂದರೆಯಾಗುತ್ತದೆ. ನಿತ್ಯ ಓಡಾಡುವ ಜನರಿಗೂ ಹಲವು ಅನಾನುಕೂಲತೆಗಳಿವೆ ಎಂದು ಪ್ರತಿಭಟನಾಕಾರರು ವಿವರಿಸಿದರು. ಗಂಟೆಗಳ ಕಾಲ ಹೆದ್ದಾರಿ ಮೇಲೆ ಪ್ರತಿಭಟನೆ ನಡೆಸಿದ ಸ್ಥಳೀಯರನ್ನು ಪೊಲೀಸರು ಒಕ್ಕಲೆಬ್ಬಿಸಿದರು. ಇದಾದ ನಂತರ ನೂತನವಾಗಿ ನಿರ್ಮಿಸಲಾಗುತ್ತಿರುವ ಹೆದ್ದಾರಿ ಮೇಲೆ ಕುಳಿತು ಪ್ರತಿಭಟನಾಕಾರರು ದರಣಿ ನಡೆಸಿದರು. ರಸ್ತೆಯುದ್ದಕ್ಕೂ ಪ್ರತಿಭಟನಾಕಾರರ ಓಡಾಟ ಹೆಚ್ಚಿದ್ದರಿಂದ ಆಗಾಗ ಟ್ರಾಪಿಕ್ ಜಾಮ್ ಉಂಟಾಯಿತು.
ಪ್ರತಿಭಟನಾಕಾರರ ಬೇಡಿಕೆ ಆಲಿಸಿದ ಅಧಿಕಾರಿಗಳು ಪರ್ಯಾಯ ರಸ್ತೆ ವ್ಯವಸ್ಥೆ ಮಾಡಿಕೊಡುವದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪ್ಲೈ ಓವರ್ನ್ನಾದರೂ ನಿರ್ಮಿಸಿ ಎಂದು ಪಟ್ಟು ಹಿಡಿದರು. ನಂತರ ಸದ್ಯ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ನಿರ್ಮಿಸಿಕೊಡಲಾಗುವದು. ನಂತರ ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗುವದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.
Leave a Comment