ಕಾರವಾರ:
ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಅಕ್ಟೋಬರ್ 23 ರಿಂದ ನವೆಂಬರ್ 5 ರವರೆಗೆ ಕುಷ್ಠರೋಗ ಪ್ರಕರಣವನ್ನು ಪತ್ತೆ ಹಚ್ಚುವ ಅಭಿಯಾನ ನಡೆಯಲಿದೆ.
ರಾಜ್ಯದ 5 ಜಿಲ್ಲೆಗಳಲ್ಲಿ ಈ ಅಭಿಯಾನ ಅನುಷ್ಟಾನಗೊಂಡಿದ್ದು, ಉತ್ತರಕನ್ನಡ ಜಿಲ್ಲೆಯೂ ಒಂದಾಗಿದೆ. ಜಿಲ್ಲೆಯಲ್ಲಿ ಇವರೆಗೆ 102 ರೋಗಿಗಳ ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುತ್ತಿದೆ. ನಾರುಹುಣ್ಣು, ಪ್ಲೇಗ್, ಪೋಲಿಯೋ ನಿರ್ಮೂಲನೆಗೆ ಆದ್ಯತೆ ನೀಡಿದಂತೆ ಕುಷ್ಠರೋಗ ನಿರ್ಮೂಲನೆಗೂ ಪ್ರತಿಯೊಬ್ಬರ ಸಹಕಾರ ಅವಶ್ಯವಾಗಿದೆ. ಕುಷ್ಠರೋಗ ಮೈಕ್ರೋ ಬ್ಯಾಕ್ಟೇರಿಯಮ್ ಲ್ಯಾಪ್ರೆ ಸೂಕ್ಷ್ಮಾಣು ಕ್ರಿಮಿಯಿಂದ ಬರುವ ಕಾಯಿಲೆ. ದೇಹದ ಮೇಲೆ ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ, ಕೆಂಪು ಅಥವಾ ತಾಮ್ರ ವರ್ಣದ ಮಚ್ಚೆಗಳು ಕಾಣುವುದು. ಕೈಕಾಲುಗಳಲ್ಲಿ ಜೋಮು ಹೀಡಿಯುವುದು, ಮುಖ ಮತ್ತು ಕಿವಿಗಳ ಮೇಲೆ ಹೊಳಪು ಮತ್ತು ಗಂಟುಗಳು ಕಾಣುವುದು ಮುಖ್ಯ ಲಕ್ಷಣವಾಗಿದೆ. ರೋಗ ಪ್ರಸರಣದ ಅವಧಿ ದೀರ್ಘಾವಧಿ ಇದ್ದು, ಪ್ರಾಥಮಿಕ ಹಂತದಲ್ಲಿ ಕಾಯಿಲೆ ಪತ್ತೆ ಹಚ್ಚಿ ಎಮ್.ಡಿ.ಟಿ ಔಷಧೋಪಚಾರ ಮೂಲಕ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.
ಅಭಿಯಾನದ ಅಂಗವಾಗಿ ಪ್ರತಿ ತಂಡಕ್ಕೆ 14 ದಿನ ಅಂದಾಜು 250 ಮನೆಗಳಂತೆ ನಿಗದಿಪಡಿಸಿದೆ. ಜಿಲ್ಲೆಯಲ್ಲಿರುವ 324300 ಮನೆಗಳ 1525421 ಜನರನ್ನು ಕಾಯಿಲೆ ಪತ್ತೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಪುರುಷ ಸ್ವಯಂ ಸೇವಕರು, ನಗರ ಪ್ರದೇಶದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಪುರುಷ ಸ್ವಯಂ ಸೇವಕರು ಭೇಟಿ ಮಾಡಿ ಚರ್ಮರೋಗದ ಕುರಿತು ತಪಾಸಣೆ ನಡೆಸಲಿದ್ದಾರೆ. ತಪಾಸಣಾ ಅಭಿಯಾನ ಮುಗಿದ ನಂತರ ಪ್ರಾ.ಆ.ಕೇಂದ್ರಗಳಲ್ಲಿ ಶಿಬಿರ ಏರ್ಪಡಿಸಿ, ಖಚಿತ ಕುಷ್ಠರೋಗಿಗಳಿಗೆ ಎಮ್.ಡಿ.ಟಿ ಔಷಧಿಯ ಮೂಲಕ ಚಿಕಿತ್ಸೆ ನೀಡಲಾಗುವುದು.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕತೆಯರು, ಪುರುಷ ಸ್ವಯಂ ಸೇವಕರು ಮನೆ ಭೇಟಿ ನೀಡಿದ ಸಂದರ್ಭದಲ್ಲಿ ಮೇಲಿನ ಯಾವುದೇ ಲಕ್ಷಣವುಳ್ಳ ಪುರುಷರು ಪುರುಷ ಸ್ವಯಂ ಸೇವಕರಿಗೆ ಹಾಗೂ ಮಹಿಳೆಯರು ಮಹಿಳಾ ಸ್ವಯಂ ಸೇವಕರಿಗೆ ಮಾಹಿತಿ ನೀಡಿ ತಪಾಸಣೆ ಮಾಡಿಸಿಕೊಳ್ಳಬೇಕು. ಹಾಗೂ ಕುಷ್ಠರೋಗವೆಂದು ಖಚಿತಪಟ್ಟಲ್ಲಿ ಎಮ್.ಡಿ.ಟಿ ಚಿಕಿತ್ಸೆ ಮೂಲಕ ಸಂಪೂರ್ಣ ಗುಣಮುಖಹೊಂದಿ ಕುಷ್ಠರೋಗ ನಿರ್ಮೂಲನೆಗೆ ಸಹಕರಿಸಬೇಕು. ಈ ಅಭಿಯಾನದಲ್ಲಿ ಜನಪ್ರತಿನಿಧಿಗಳು, ಸಾರ್ವಜನಿಕ ಬಂಧುಗಳು, ಖಾಸಗಿ ವೈದ್ಯರು, ಸ್ವಯಂಸೇವಾ ಸಂಸ್ಥೆ ಪದಾಧಿಕಾರಿಗಳು, ಧಾರ್ಮಿಕ ಮುಖಂಡರು, ಅಂತರ್ ಇಲಾಖಾ ಅಧಿಕಾರಿಗಳು ಸಹಕರಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕಾಗಿ ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿÀ ಡಾ| ಜಿ.ಎನ್. ಅಶೋಕ ಕುಮಾರ ವಿನಂತಿಸಿದ್ದಾರೆ.
Leave a Comment