ಕಾರವಾರ:
ಶಿರವಾಡ ಗ್ರಾಮ ಪಂಚಾಯತ ವ್ಯಾಪ್ತಿಯ ಶಾಸನವಾಡದಲ್ಲಿನ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗುತ್ತಿದ್ದು, ಇದಕ್ಕೆ ತಡೆಗೋಡೆ ನಿರ್ಮಿಸುವಂತೆ ಸ್ಥಳೀಯ ಗ್ರಾಮ ಪಂಚಾಯತ ಸದಸ್ಯ ಉದಯ ಬಶೆಟ್ಟಿ ಶಾಸಕರಿಗೆ ಆಗ್ರಹಿಸಿದ್ದಾರೆ.
ಈ ಕುರಿತು ಮನವಿ ಸಲ್ಲಿಸಿರುವ ಅವರು, ಕೃಷಿ ಜಮೀನಿಗೆ ಕಾಳಿ ನದಿಯ ಉಪ್ಪು ನೀರು ನುಗ್ಗುವದರಿಂದ 240ಕುಟುಂಬಗಳಿಗೆ ತೊಂದರೆಯಾಗುತ್ತಿದೆ. ನೀರಿನ ಏರಿಳಿತದಿಂದ ಭತ್ತದ ಬೆಳೆಗಳೆಲ್ಲವೂ ಹಾಳಾಗುತ್ತಿದೆ. ಕೆಲವೊಮ್ಮೆ ಮನೆಯೊಳಗೂ ನೀರು ನುಗ್ಗಿದ ಉದಾಹರಣೆಗಳಿದ್ದು, ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೃಷಿ ಜಮೀನನ್ನು ಬಂಜರು ಬಿಟ್ಟರೆ ಸರ್ಕಾರ ರೈತರಿಗೆ ನೋಟಿಸ್ ನೀಡುತ್ತಿದೆ. ಕೃಷಿ ಕೆಲಸ ಮಾಡಲು ಮುಂದಾದರೆ ಉಪ್ಪು ನೀರಿನಿಂದ ನಷ್ಟ ಅನುಭವಿಸಬೇಕಾಗಿದೆ. ಕುಡಿಯುವ ನೀರಿನ ಬಾವಿಗಳಿಗೂ ಉಪ್ಪು ನೀರು ನುಗ್ಗಿ ನೀರಿಗೆ ತೊಂದರೆ ಮಾಡುತ್ತಿದೆ. ಹೀಗಾಗಿ ಕೂಡಲೇ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
Leave a Comment