ಕಾರವಾರ: ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ನಾಡಿನ ಹಿರಿಯ ಸಾಹಿತಿ ಡಾ. ಆರ್.ಪಿ.ಹೆಗಡೆ ಸೂಳಗಾರ ಆಯ್ಕೆ ಆಗಿದ್ದಾರೆ.
ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರಕ್ಕೆ ಹೊನ್ನಾವರದ ಪ್ರಶಾಂತ ಹೆಗಡೆ ಮೂಡಲಮನೆ, ಯಲ್ಲಾಪುರದ ನಾಗರಾಜ ಹುಡೇದ, ಶಿರಸಿಯ ಗಾಯತ್ರಿ ರಾಘವೇಂದ್ರ, ದಾಂಡೇಲಿಯ ನರೇಶ ನಾಯ್ಕ ಆಯ್ಕೆ ಆಗಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದ ಹಿರಿಯ ಸಾಹಿತಿ ಆರ್.ಪಿ.ಹೆಗಡೆ ಸೂಳಗಾರ ಕಳೆದ ಐದು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿದ್ದಾರೆ. ಕಥೆ, ಕಾದಂಬರಿ, ನಾಟಕ, ಮಕ್ಕಳ ಸಾಹಿತ್ಯ, ವಿಮರ್ಶೆ, ಅನುವಾದ ಸಾಹಿತ್ಯ, ಜಾನಪದ ಸಂಗ್ರಹ ಸೇರಿದಂತೆ ಸುಮಾರು 84 ಕೃತಿಗಳನ್ನು ರಚಿಸಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ರೂ. 10000, ಪ್ರಶಸ್ತಿ ಫಲಕ, ಸನ್ಮಾನ ಒಳಗೊಂಡಿರುತ್ತದೆ. ಉದಯೋನ್ಮುಖ ಬರಹಗಾರರಿಗೆ ಪ್ರೋತ್ಸಾಹ ರೂಪವಾಗಿ ನೀಡಲಾಗುವ ಜಿಲ್ಲಾ ರಾಜ್ಯೋತ್ಸವ ಯುವ ಕೃತಿ ಪುರಸ್ಕಾರ ಕನ್ನಡದ ಕೃತಿಯೊಂದರ ಜೊತೆಗೆ ಪುರಸ್ಕಾರ ಫಲಕ ಒಳಗೊಂಡಿರುತ್ತದೆ. ಸಿದ್ದಾಪುರದಲ್ಲಿ ನ.1 ರಂದು ಮಧ್ಯಾಹ್ನ ಜಿಲ್ಲಾ ಕಸಾಪ ಹಮ್ಮಿಕೊಳ್ಳುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕ.ಸಾ.ಪ. ಪ್ರಕಟಣೆ ತಿಳಿಸಿದೆ.
Leave a Comment