ಕಾರವಾರ: ಕೈಗಾ ಅಣು ವಿಕಿರಣ ಸೋರಿಕೆ ಅವಘಡ ತಡೆಗಟ್ಟುವ ಸಂಬಂಧ ನವೆಂಬರ್ 18ರಂದು 11ನೇ ಅಣಕು ಪ್ರದರ್ಶನ ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಎನ್ಪಿಸಿಎಲ್ ಕೈಗಾ ಸಹಯೋಗದಲ್ಲಿ ನಡೆಯಲಿದೆ. ಪ್ರತಿ 2 ವರ್ಷಗಳಿಗೊಮ್ಮೆ ನಡೆಯುವ ಈ ಅಣಕು ಪ್ರದರ್ಶನ ಈ ಬಾರಿ ಕೈಗಾ ಅಣುಸ್ಥಾವರದ ಸೆಕ್ಟರ್ ಎಂ. ವ್ಯಾಪ್ತಿಯಲ್ಲಿ ಬರುವ ಕುಚೇಗಾರ ಗ್ರಾಮದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಕಾರವಾರ ತಾಲೂಕಿನ ಕೈಗಾ ಅಣು ಸ್ಥಾವರದಲ್ಲಿ ಅಣು ವಿಕಿರಣದಿಂದ ಆಗಬಹುದಾದ ಅನಾಹುತಗಳನ್ನು ತಡೆಗಟ್ಟಲು ಸಾಕಷ್ಟು ಪ್ರಮಾಣದಲ್ಲಿ ಸುರಕ್ಷತಾ ಕ್ರಮಗಳಿವೆ. ಆದರೂ ಅಣು ವಿಕಿರಣದಿಂದ ಒಂದು ವೇಳೆ ಹಾನಿ ಸಂಭವಿಸಿದಲ್ಲಿ ಅದನ್ನು ತಕ್ಷಣ ಹೇಗೆ ಸ್ಪಂದಿಸಬೇಕು ಎಂಬ ಬಗ್ಗೆ ಈಗಾಗಲೇ ಪೂರ್ವಸಿದ್ಧತೆ ಹಾಗೂ ಯೋಜನೆಗಳನ್ನು ರೂಪಿಸಲಾಗಿದೆ. ಈ ಸಂಬಂಧ ನವೆಂಬರ್ 18ರಂದು 11ನೇ ಅಣಕು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲದೆ, ಕುಚೇಗಾರ ಗ್ರಾಮದ ಸಾರ್ವಜನಿಕರನ್ನು ಕೇರವಾಡಿ ಸರ್ಕಾರಿ ಪ್ರೌಢಶಾಲೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದ್ದು ಈ ಅಣಕು ಪ್ರದರ್ಶನ ಸಲುವಾಗಿ ಅಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಲಾಗಿದೆ. ಈ ಸಲುವಾಗಿ ಸಂಬಂಧಿಸಿದ ಎಲ್ಲರೂ ಸಹಕರಿಸುವಂತೆ ಅವರು ತಿಳಿದ್ದಾರೆ.
Leave a Comment