ಕಾರವಾರ: ಕಳೆದ ನಾಲ್ಕುವರೆ ವರ್ಷಗಳಿಂದ ಜನರಿಂದ ದೂರವಿದ್ದ ಮಾಜಿ ಸಚಿವ ಆನಂದ ಅಸ್ನೋಟಿಕರ್ ಭಾನುವಾರ ನಗರದಲ್ಲಿ ದಿಡೀರ್ ಪ್ರತ್ಯಕ್ಷರಾಗುವ ಸಾದ್ಯತೆಯಿದೆ. ಕಾರಣ ಅವರ ಬೆಂಬಲಿಗರೇ ಅಸ್ನೋಟಿಕರ್ ಮನೆ ಮುಂದೆ ಭಾನುವಾರ ಪ್ರತಿಭಟನೆ ನಡೆಸಲಿದ್ದಾರೆ. ಗೊಂದಲದಲ್ಲಿರುವ ಜನತೆಗೆ ಆನಂದ ಅಸ್ನೋಟಿಕರ್ ತಮ್ಮ ರಾಜಕೀಯ ನಿಲುವು ತಿಳಿಸಬೇಕು ಎಂಬುದು ಅಭಿಮಾನಿಗಳ ಆಗ್ರಹವಾಗಿದೆ.
2013ರ ಚುನಾವಣೆಯಲ್ಲಿ ಪಕ್ಷೇತರ ಶಾಸಕ ಸತೀಶ್ ಸೈಲ್ ವಿರುದ್ದ ಸೋಲು ಕಂಡ ಆನಂದ ಅಸ್ನೋಟಿಕರ್ ಮತ್ತೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ. ತಮ್ಮ ಉದ್ಯಮದಲ್ಲಿ ತೊಡಗಿಕೊಂಡಿರುವ ಅವರು ಹೆಚ್ಚಾಗಿ ಗೋವಾದಲ್ಲಿಯೇ ನೆಲೆ ಕಂಡುಕೊಂಡಿದ್ದರು. ವರ್ಷದ ಹಿಂದೊಮ್ಮೆ ಸುದ್ದಿಗೊಷ್ಟಿ ನಡೆಸಿ ಬರುವ ಚುನಾವಣೆಗೆ ಸ್ಪರ್ಧಿಸುವದಾಗಿ ಹೇಳಿಕೆ ನೀಡಿದ್ದರು. ಆದರೆ, ಅದಾದ ನಂತರವೂ ಪತ್ತೆಯಿರಲಿಲ್ಲ. ಸದ್ಯ ಚುನಾವಣೆಗೆ ದಿನ ಗಣನೆ ಆರಂಭವಾಗಿದ್ದು, ಆನಂದ ಅಸ್ನೋಟಿಕರ್ ಯಾವ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂದು ಯಾರಿಗೂ ಗೊತ್ತಿಲ್ಲ. ಪ್ರಸ್ತುತ ಆನಂದ ಅಸ್ನೋಟಿಕರ್ ಬಿಜೆಪಿಯಲ್ಲಿಯೂ ಗುರುತಿಸಿಕೊಂಡಿಲ್ಲ. ಕಾಂಗ್ರೇಸ್ನಲ್ಲಿಯೂ ಕ್ರಿಯಾಶೀಲರಾಗಿಲ್ಲ. ಜೆಡಿಎಸ್ ಸೇರುವ ಬಗ್ಗೆಯೂ ಖಚಿತತೆ ಇಲ್ಲ. ಹೀಗಾಗಿ ಅಸ್ನೋಟಿಕರ್ ಅಭಿಮಾನಿಗಳು ಗೊಂದಲಕ್ಕಿಡಾಗಿದ್ದಾರೆ.
ಈಚೆಗೆ ಸುದ್ದಿಗೊಷ್ಟಿ ನಡೆಸಿರುವ ಅಸ್ನೋಟಿಕರ್ ಬೆಂಬಲಿಗರು ಅವರ ಮನೆ ಮುಂದೆ ದರಣಿ ನಡೆಸುವ ನಿರ್ಧಾರ ಪ್ರಕಟಿಸಿದ್ದಾರೆ. ವಿವಿಧ ಸಂಘಟನೆಯವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಆನಂದ ಅಸ್ನೋಟಿಕರ್ರ ತಾಯಿ, ವಿಧಾನ ಪರಿಷತ್ ಮಾಜಿ ಸದಸ್ಯೆ ಶೋಭಲತಾ ಅಸ್ನೋಟಿಕರ್ ಮೂಲಕವೂ ಆನಂದರ ಮೇಲೆ ಒತ್ತಡ ತರಲಾಗಿದೆ. ಆದರೂ ಯಾವದೇ ಪ್ರತಿಕ್ರಿಯೆ ಬರದ ಕಾರಣ ತಮ್ಮ ಗೊಂದಲ ಬಗೆಹರಿಸುವಂತೆ ಆಗ್ರಹಿಸಿ ಭಾನುವಾರ ಅಸ್ನೋಟಿಕರ್ ಮನೆ ಮುಂದೆ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಅಭಿಮಾನಿಗಳನ್ನು ಸಮಾಧಾನ ಪಡಿಸಲು ಆನಂದ ಅಸ್ನೋಟಿಕರ್ ಪ್ರತ್ಯಕ್ಷರಾಗುವ ಸಾಧ್ಯತೆಗಳು ದಟ್ಟವಾಗಿದೆ.
Leave a Comment