ಕಾರವಾರ: ಲಯನ್ಸ್ ಕ್ಲಬ್, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸೊಸೈಟಿ, ತಾಲೂಕಾ ಆರೋಗ್ಯ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹೊಲಿಗೆ ರಹಿತ ನೇತ್ರ ಶಸ್ತ್ರ ಚಿಕಿತ್ಸಾಶಿಬಿರವನ್ನು ನ. 18ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಾಯನ್ಸ್ ಕ್ಲಬ್ ಅಧ್ಯಕ್ಷ ಅಲ್ತಾಫ್ ಶೇಖ್ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವು ಲಯನ್ಸ್ ಕ್ಲಬ್ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಆಯೋಜಿಸುತ್ತಿದೆ. ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ಸೈಯದ್ ಝಲ್ಫೀಕರ್, ಡಾ. ಚಂದ್ರಕಾಂತ, ಡಾ. ಪ್ರಮೋದ ಬೆಂಗಳೂರಿನಿಂದ ಆಗಮಿಸಿ ಚಿಕಿತ್ಸೆ ನೀಡಲಿದ್ದಾರೆ. ಅಲ್ಲದೆ ಜಿಲ್ಲಾಸ್ಪತ್ರೆಯ ನೇತ್ರಚಿಕಿತ್ಸಕ ಡಾ. ರಮೇಶ ವೆಂಕಿಮನೆ ಶಿಬಿರದ ಉಸ್ತುವಾರಿ ಹಾಗೂ ನಂತರದ ದಿನಗಳಲ್ಲಿನ ಚಿಕಿತ್ಸೆಯನ್ನು ನೀಡಲಿದ್ದಾರೆ ಎಂದು ಹೇಳಿದರು.
ಶಿಬಿರದಲ್ಲಿ ಮುಖ್ಯವಾಗಿ ಕಣ್ಣಿನ ತಪಾಸಣೆ ನಡೆಸಿ ಮೋತಿ ಬಿಂದುವಿನ ದೋಷವುಳ್ಳವರಿಗೆ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಿದ್ದಾರೆ. ಇನ್ನಿತರ ಸಮಸ್ಯೆ ಇರುವವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಿದ್ದಾರೆ. ಶಿಬರಕ್ಕೆ ಆಗಮಿಸುವವರು ಹತ್ತಿರದ ಪ್ರಾಥಮಿಕ ಕೇಂದ್ರಗಳಲ್ಲಿ ರಕ್ತದೊತ್ತಡ ಹಾಗೂ ಮೂತ್ರ ಪರೀಕ್ಷೆ ಮಾಡಿಕೊಂಡು ಅದರ ವರದಿಯೊಂದಿಗೆ ನವೆಂಬರ್ 18ರ ಬೆಳಿಗ್ಗೆ 8.30ಕ್ಕೆ ಜಿಲ್ಲಾಸ್ಪತ್ರೆಯ ನೇತ್ರ ವಿಭಾಗದಲ್ಲಿ ಹಾಜರಿರಬೇಕು. ಜತೆಗೆ ಒಬ್ಬರನ್ನು ಸಹಾಯಕರಾಗಿ ಜತೆಯಲ್ಲಿ ಕಡ್ಡಾಯವಾಗಿ ಕರೆತರಬೇಕು ಎಂದು ಹೇಳಿದರು.
ಶಬಿರದಲ್ಲಿ ಸುಮಾರು 300ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು ಈಗಾಗಲೇ ಜಿಲ್ಲಾಸ್ಪತ್ರೆಗೆ ದಾಖಲಾದವರನ್ನು ಸಂಪರ್ಕಿಸಿ ಶಿಬಿರದ ಪ್ರಯೋಜನ ಪಡೆಯುವಂತೆ ಮನವಿ ಮಾಡಲಾಗಿದೆ. ಶಿಬಿರದಲ್ಲಿ ಭಾಗವಹಿಸುವ ಎಲ್ಲರಿಗೂ ಚಿಕಿತ್ಸೆ ನೀಡಲಾಗುವುದು. ಉಚಿತ ಊಟದ ವ್ಯವಸ್ಥೆ ಹಾಗೂ ಅಂದು ಸಂಜೆ ತೆರಳಲಾಗದವರಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ವಿವರಿಸಿದರು.
ಕ್ಲಬ್ನ ಶಶಿನಂದನ್ ಮಾಸೂರಕರ್, ವಿನೋದ ನಾಯ್ಕ, ಸಾದಿಕ್ ಖಾನ್, ಹನೀಫ್ ಮುಲ್ಲಾ ಉಪಸ್ಥಿತರಿದ್ದರು.
Leave a Comment