ಕಾರವಾರ:
ಅಂದ ದಂಪತಿಗಳಿಬ್ಬರು ತಮ್ಮಿಬ್ಬರು ಮಕ್ಕಳೊಂದಿಗೆ ಜೀವನೋಪಾಯಕ್ಕಾಗಿ ಭಿಕ್ಷಾಟನೆಯಲ್ಲಿ ತೊಡಗಿದ್ದು, ಅವರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ನೀಡಿ ಜೀವನ ನಿರ್ವಹಣೆಗೆ ಸಹಕಾರ ನೀಡಬೇಕು ಎಂದು ಒತ್ತಾಯಿಸಿ ಕನ್ನಡ ವಾಟಾಳ್ ಪಕ್ಷದ ರಾಘು ನಾಯ್ಕ ಸಂತೃಸ್ಥರೊಂದಿಗೆ ಅಪರ ಜಿಲ್ಲಾಧಿಕಾರಿ ಎಚ್ ಪ್ರಸನ್ನರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಮುಂಡಗೋಡ ತಾಲೂಕಿನ ಪಕೀರಪ್ಪ ಹಾಗೂ ಅವರ ಪತ್ನಿ ಪಾರ್ವತಿ ಎಂಬುವವರಿಗೆ ಎರಡು ಕಣ್ಣುಗಳು ಕಾಣಿಸುವುದಿಲ್ಲ. ತಂದೆ ತಾಯಿಗಳ ಜೊತೆಯಲ್ಲಿದ್ದ ಇವರು ಅವರು ಮರಣ ಹೊಂದಿದ ಬಳಿಕ ತಮ್ಮಿಬ್ಬರು ಚಿಕ್ಕ ಮಕ್ಕಳ ಸಹಕಾರದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಆ ಮಕ್ಕಳು ವಿದ್ಯಾಭ್ಯಾಸದಿಂದ ಕೂಡ ವಂಚಿತರಾಗಿದ್ದಾರೆ ಎಂದು ಹೇಳಿದರು. ಅವರ ಹೆಸರಿನಲ್ಲಿ ಮುಂಡಗೋಡಿನಲ್ಲಿ ನಿವೇಶನ ಇದೆ. ಆದರೆ ಅಸಹಾಯಕರಾದ ಅವರಿಗೆ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರಕಾರದಿಂದ ಸಿಗುವ ಯಾವುದೇ ಸೌಲಭ್ಯವನ್ನು ಪಡೆಯುತ್ತಿಲ್ಲ. ಜೀವನ ನಿರ್ವಹಣೆಗಾಗಿ ಮಕ್ಕಳ ಜತೆಯಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದಾರೆ. ಆದ್ದರಿಂದ ಅವರಿಗೆ ವಾಸಮಾಡಲು ಮನೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸರಕಾರದಿಂದ ದೇವರಾಜ ಅರಸು ವಸತಿ ಯೋಜನೆಯಲ್ಲಿ ಮನೆಗಳನ್ನು ನೀಡಲಾಗುತ್ತಿದ್ದು, ಅವರ ಹೆಸರಿನಲ್ಲಿ ನಿವೇಶನ ಇದ್ದಲ್ಲಿ ಅದನ್ನು ನೀಡಬೇಕು. ಈ ಬಗ್ಗೆ ಮುಂಡಗೋಡ ತಹಶೀಲ್ದಾರ್‍ರಿಗೆ ತಮ್ಮ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸರಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುತಿದ್ದು, ಅಲ್ಲಿ ಅವರನ್ನು ಸೇರಿಸಬಹುದು ಎಂದು ಹೇಳಿದರು.
Leave a Comment