ಕಾರವಾರ: ಕೈಗಾ ಅಣು ವಿದ್ಯುತ್‍ಸ್ಥಾವರ ವ್ಯಾಪ್ತಿಯಲ್ಲಿ 5 ಮತ್ತು 6ನೇ ಘಟಕ ನಿರ್ಮಾಣ ಕೆಲಸ ಪ್ರಗತಿಯಲ್ಲಿದೆ ಎಂದು ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಸಂಜಯ್ ಕುಮಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಈಗಾಗಲೇ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಇನ್ನು ಕೆಲ ಇಲಾಖೆಗಳ ಅನುಮತಿ ಪಡೆಯುವದು ಬಾಕಿ ಇದೆ ಎಂದರು. ಈ ಪ್ರದೇಶದಲ್ಲಿ ವಿವಿಧ ತಾಂತ್ರಿಕ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ. ಪರಿಶೀಲನೆಯ ವರದಿ ಸಮೇತ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು. ಕೈಗಾದ ಮೊದಲ ನಾಲ್ಕು ಘಟಕಗಳಿಂದ ಈಗಾಗಲೇ ಟ್ಟು 900 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. 540ಕ್ಕೂ ಹೆಚ್ಚು ದಿನಗಳ ಕಾಲ ನಿರಂತರವಾಗಿ ವಿದ್ಯುತ್ ಉತ್ಪಾದನೆ ಮಾಡಿದ ದೇಶದ ಏಕೈಕ ಅಣು ವಿದ್ಯುತ್ ಘಟಕವೆಂದು ಕೈಗಾ ಅಣು ವಿದ್ಯುತ್ ಸ್ಥಾವರ ಖ್ಯಾತಿ ಪಡೆದಿದೆ.
ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರದಿಂದ ನಿರ್ಮಾಣಕ್ಕೆ ಅನುಮತಿ ಪಡೆದ ದೇಶದ 10 ಅಣು ವಿದ್ಯುತ್ ಘಟಕಗಳ ಪೈಕಿ ಕೈಗಾದ 5 ಮತ್ತು 6ನೇ ಘಟಕಕ್ಕೆ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಹೇಳಿದರು. ಬಾಬಾ ಅಣು ಸಂಶೋಧನಾ ಕೇಂದ್ರ ಹಾಗೂ ಇಂಡಿಯನ್ ಎನ್ವಿರಾನ್‍ಮೆಂಟಲ್ ರೇಡಿಯೇಶನ್ ಮಾನಿಟರಿಂಗ್ ಸಿಸ್ಟಂ ಸಂಸ್ಥೆಯವರು ಕೈಗಾದಲ್ಲಿ ವಿಕಿರಣ ಹೊರಸೂಸುವ ಪ್ರಮಾಣವನ್ನು ಅಳೆಯಲು ಉಪಕರಣಗಳನ್ನು ಅಳವಡಿಸಿದ್ದಾರೆ. ಉಪಕರಣಗಳ ದಾಖಲೆಯ ಪ್ರಕಾರ ಕೈಗಾ ಮತ್ತು ಸುತ್ತಲಿನ ಪ್ರದೇಶದಲ್ಲಿ ವಿಕಿರಣ ಪ್ರಮಾಣ ಸಾಮಾನ್ಯ ಮಟ್ಟದಲ್ಲಿದೆ ಎಂದರು.
ಯಾವುದೇ ಪ್ರದೇಶದ ಭೌಗೂೀಳಿಕ ಸ್ಥಿತಿಗತಿಗಳನ್ನು ಅವಲಂಭಿಸಿ ವಿಕಿರಣ ಪ್ರಮಾಣ ವ್ಯತ್ಯಾಸವಾಗುತ್ತದೆ. ಸಮುದ್ರ ಮಟ್ಟದಲ್ಲಿ ಇಕಿರಣ ಪ್ರಮಾಣ ಕಡಿಮೆ ಇದ್ದರೆ ಮೇಲ್ಮಟ್ಟದಲ್ಲಿ ಹೆಚ್ಚಾಗುತ್ತದೆ. ಭೂಮಿಯ ಒಳಗೆ ಥೋರಿಯಂ, ಯುರೇನಿಯಂ ಮೊದಲಾದ ಲೋಹಗಳ ಪ್ರಮಾಣ ಹೆಚ್ಚಿದ್ದರೆ ವಿಕಿರಣ ಪ್ರಮಾಣವೂ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಕೈಗಾದಲ್ಲಿ ಅಣು ಸ್ಥಾವರ ನಿರ್ಮಾಣದಿಂದ ವಿಕಿರಣ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಆಗಿಲ್ಲಎಂದು ಸ್ಪಷ್ಟಪಡಿಸಿದರು. ಜಾಗತಿಕ ವಿಕಿರಣ ಪ್ರಮಾಣ ಸರಾಸರಿ 2400 ಮೈಕ್ರೋ ಸೆವರ್ಟ್ ಇದ್ದರೆ ಕೈಗಾದಲ್ಲಿ 1530 ಮೈಕ್ರೋ ಸೆವರ್ಟ್ ಮಾತ್ರ ಇದೆ. ರಾಜ್ಯದ ಮೈಸೂರು ಮತ್ತು ಬೆಂಗಳೂರಿನಲ್ಲಿ ವಿಕಿರಣ ಪ್ರಮಾಣ ಕೈಗಾಕ್ಕಿಂತ ಹೆಚ್ಚಿದೆ ಎಂದು ವಿವರಿಸಿದರು.
Leave a Comment