ಕಾರವಾರ: ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಕರಾವಳಿಯ ಮೂರು ಜಿಲ್ಲೆಗಳಲ್ಲಿಯೇ ಉತ್ತರ ಕನ್ನಡ ಜಿಲ್ಲೆ ಅತ್ಯುತ್ತಮ ಶೈಕ್ಷಣಿಕ ಗುಣಮಟ್ಟ ಹೊಂದಿದೆ ಎಂದು ಮಾಜಿ ಸಚಿವ, ಶಾಸಕ ಬಸವರಾಜ್ ಹೊರಟ್ಟಿ ಹೇಳಿದರು.
ಬಾಲಮಂದಿರ ಪ್ರೌಢ ಶಾಲೆಯ ಸಭಾಂಗಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಹಾಗೂ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯಗಳ ಪ್ರಾಂಶುಪಾಲರ ಸಂಘದ ಆಶ್ರಯದಲ್ಲಿ ನಡೆದ ಶೈಕ್ಷಣಿಕ ಸಮ್ಮೇಳನ, ಪ್ರತಿಭಾ ಪುರಸ್ಕಾರ, ಸನ್ಮಾನ ಮತ್ತು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸರಕಾರಿ ಶಾಲಾ ಶಿಕ್ಷಕರ ಸಂಘ ಮತ್ತು ಅನುದಾನಿತ ಶಾಲಾ ಶಿಕ್ಷಕರ ಸಂಘ ಎಂಬ ಬೇಧಭಾವ ಇಲ್ಲದೇ ಎಲ್ಲರೂ ಒಟ್ಟಾಗಿ ಒಂದೇ ವೇದಿಕೆಯಡಿ ಕೆಲಸ ಮಾಡುತ್ತಿದ್ದಾರೆ. ಮುಖ್ಯಾಧ್ಯಾಪಕರ ಪ್ರಯತ್ನದ ಫಲದಿಂದ ಕಾರವಾರ ಶೈಕ್ಷಣಿಕ ಜಿಲ್ಲೆ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಗಳಲ್ಲಿ ಶೇ.100 ಫಲಿತಾಂಶ ದಾಖಲಿಸುವಂತಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಂತಕ ಡಾ.ಕೆ.ಪಿ.ಪುತ್ತೂರಾಯ ವಿಶೇಷ ಉಪನ್ಯಾಸ ನೀಡಿ, ದೇಶಕ್ಕೆ ಉತ್ತಮ ನಾಗರೀಕನನ್ನು ಸೃಷ್ಠಿಸುವ ಗುರುತರವಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದು ಬದುಕಿಗೆ ಸಂತೋಷದಾಯಕ ಮತ್ತು ಪುಣ್ಯದಾಯಕ ವೃತ್ತಿಯಾಗಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪಿ.ಕೆ.ಪ್ರಕಾಶ ಮಾತನಾಡಿ, ಈ ಬಾರಿಯ ಪರೀಕ್ಷೆಗಳಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆಯನ್ನು ಪ್ರಥಮ ಸ್ಥಾನ ಗಳಿಸುವ ದಿಶೆಯಲ್ಲಿ ಸರ್ವ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು. ಬಳಿಕ ಜಿಲ್ಲೆಯ 15 ಕ್ಕೂ ಹೆಚ್ಚಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ನಿವೃತ್ತಿ ಹೊಂದಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಪರೀಕ್ಷೆಯಲ್ಲಿ ಶೇ.ನೂರಕ್ಕೆ ನೂರು ಫಲಿತಾಂಶ ಮಾಡಿದ ಶಾಲಾ ಮುಖ್ಯಾಧ್ಯಾಪಕರನ್ನು ಗೌರವಿಸಲಾಯಿತು. ರಾಜ್ಯ ಮುಖ್ಯೋಪಾಧ್ಯಾಯರ ಹಾಗೂ ಪ.ಪೂ.ಮಹಾವಿದ್ಯಾಲಯ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ.ಎನ್.ಚಂದ್ರೇಗೌಡ ಪ್ರಸ್ತಾಪಿಸಿದರು. ಸಂಘದ ಅಧ್ಯಕ್ಷ ರವೀಂದ್ರ ಖೇಣಿ, ಕುಮಟಾ ಡಯಟ್‍ನ ಉಪನಿರ್ದೇಶಕ ಈಶ್ವರ್ ಎಚ್.ನಾಯ್ಕ, ಎಲ್.ಎಂ.ಹೆಗಡೆ, ಎಂ.ಪಿ.ನಾಯ್ಕ ಇತರರಿದ್ದರು.
Leave a Comment