ಹಳಿಯಾಳ: ಪರೇಶ್ ಮೆಸ್ತ ಸಾವಿನ ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಈವರೆಗೆ ಬಂದಿಲ್ಲ, ಸಾವಿನ ನಿಖರ ಕಾರಣ ಇನ್ನೂ ತಿಳಿದಿಲ್ಲ ಅಲ್ಲದೇ ಈಗಾಗಲೇ ಕುಟುಂಬಸ್ಥರ ಆಗ್ರಹದ ಮೇರೆಗೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದರೂ ಬಿಜೆಪಿ ಪಕ್ಷದವರು, ಹಿಂದೂ ಸಂಘಟನೆಗಳು ಜಿಲ್ಲೆಯಲ್ಲಿ ಪ್ರತಿಭಟನೆ, ಬಂದ್ ಹೆಸರಿನಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ದೇಶಪಾಂಡೆ ಭವನದಲ್ಲಿ ಕರೆದ ಪತ್ರಿಕಾಗೊಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಪರೇಶ್ ಸಾವಿನ ನಂತರ ಫೇಸ್ಬುಕ್, ವಾಟ್ಸ್ಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಸುಳ್ಳು ವದಂತಿಗಳನ್ನು ಹಬ್ಬಿಸಿ ಸಾವಿನ ಬಗ್ಗೆ ಗೊಂದಲ, ಸಂದೇಹ, ಸಂಶಯ ಮೂಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದ ಸಚಿವರು ಪರೇಶ್ ಮರಣೋತ್ತರ ಪರೀಕ್ಷೆ ಆತನ ಕುಟುಂಬದವರ ಸಮಕ್ಷಮ ಮಣಿಪಾಲ ವೈದ್ಯರಿಂದ ನಡೆಸಲಾಗಿದ್ದು ಅಂತಿಮ ವರದಿ ಬಂದಿಲ್ಲ ಆದರೂ ಬಿಜೆಪಿ ಪಕ್ಷದವರು ತಮ್ಮ ಸಂಘಟನೆಗಳ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಠಿಸಿದ್ದು ರಾಜಕೀಯ ಮಾಡುತ್ತಿದ್ದಾರೆಂದು ಕಿಡಿ ಕಾರಿದರು. ಜಿಲ್ಲೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಶಸ್ವಿ ಕಾರ್ಯಕ್ರಮಗಳು ಅವರ ಪ್ರಭಾವ ಹಾಗೂ ಜನರ ಅಭಿಪ್ರಾಯ ಕಂಡು ಹೆದರಿರುವ ಬಿಜೆಪಿಗರು ಜನತೆಯ ದಾರಿ ತಪ್ಪಿಸಲು ಪ್ರತಿಭಟನೆ, ಬಂದ್ಗಳ ಮೂಲಕ ಈ ರೀತಿಯ ಗಲಭೆಗಳನ್ನು ಸೃಷ್ಠಿಸುತ್ತಿದ್ದಾರೆಂದು ಆಪಾದಿಸಿದ ದೇಶಪಾಂಡೆ ಸಜ್ಜನರ, ಶಾಂತಿ ಪ್ರಿಯರ ಗೌರವಯುತ ಜಿಲ್ಲೆಯ ಹೆಸರಿಗೆ ಮಸಿ ಬಳಿಯುವ ಬಿಜೆಪಿಗರ ನಿಲುವನ್ನು ತಾವು ವಿರೋಧಿಸುವುದಾಗಿ ಹೇಳಿ ಪ್ರತಿಭಟನೆಗಳು ರಾಜಕೀಯ ಆಗುತ್ತೆ ಹೊರತು ಮೃತನಿಗೆ ಸಾಂತ್ವನ ಅಲ್ಲ ಎಂದ ಅವರು ಯಾರು ಅನಾವಶ್ಯಕ ಪ್ರತಿಭಟನೆಗಳು, ಬಂದ್ನಲ್ಲಿ ಭಾಗವಹಿಸಬೇಡಿ, ಸುಳ್ಳು ವದಂತಿಗಳಿಗೆ ಕಿವಿಗೊಡದೆ ಕಾನೂನು, ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಂಡು ಹೋಗುವಂತೆ ಮನವಿ ಮಾಡಿದರು.
Leave a Comment