ಕಾರವಾರ: ಪರೇಶ್ ಮೇಸ್ತಾ ಕುಟುಂಬದವರಿಗೆ ಪರಿಹಾರ ವಿತರಣೆ, ಶೋಭಾ ಕರಂದ್ಲಾಜೆ ಹಾಗೂ ಅಮಾಯಕ ಹಿಂದೂಗಳ ವಿರುದ್ದ ದಾಖಲಿಸಿದ ಪ್ರಕರಣಗಳನ್ನು ಕೈ ಬಿಡುವಂತೆ ಆಗ್ರಹಿಸಿ ಡಿ. 29ರ ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರತಿಭಟನಾ ಸಭೆ ನಡೆಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.
ಸೋಮವಾರ ಸುದ್ದಿಗೊಷ್ಟಿ ನಡೆಸಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ ನಾಯ್ಕ ಪ್ರತಿಭಟನೆಯ ವಿಷಯ ಪ್ರಕಟಸಿದರು. ಡಿ. 6ರಂದು ಪರೇಶ್ ಮೇಸ್ತಾ ಹತ್ಯೆ ನಡೆದಿದ್ದು, ಇದನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಈ ವರೆಗೂ ರಾಜ್ಯ ಸರ್ಕಾರದಿಂದ ಅವರ ಕುಟುಂಬದವರಿಗೆ ದೊರೆಯಬೇಕಾದ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ಮರಣೋತ್ತರ ಪರೀಕ್ಷೆ ವರದಿ ಹೊರ ಬರುವ ಮುನ್ನವೇ ಇದೊಂದು ಸಹಜ ಸಾವು ಎಂದು ಬಿಂಬಿಸಲು ಸರ್ಕಾರ ಮುಂದಾಯಿತು. ಇದರ ಪರಿಣಾಮ ಜನ ರೊಚ್ಚಿಗೆದ್ದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಹಿಂದುಗಳನ್ನು ಗುರಿಯಾಗಿರಿಸಿಕೊಂಡು ಪೊಲೀಸರು ವಿವಿಧ ಪ್ರಕರಣ ದಾಖಲಿಸುತ್ತಿದ್ದು, ದೋಷಾರೋಪಣ ಪಟ್ಟಿ ಸಲ್ಲಿಕೆ ವೇಳೆ ಅಮಾಯಕ ಹಿಂದೂಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಇದಲ್ಲದೇ ಬಿಜೆಪಿ ಮುಖಂಡೆ ಶೋಭಾ ಕರಂದ್ಲಾಜೆ ವಿರುದ್ದವೂ ಅನಾವಷ್ಯಕವಾಗಿ ಪ್ರಕರಣ ದಾಖಲಿಸಲಾಗಿದೆ ಇದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಭಟ್ಕಳದಲ್ಲಿ ಅಂಗಡಿ ಕಳೆದುಕೊಂಡವರಿಗೆ ಮತ್ತೆ ಅಂಗಡಿ ನೀಡಬೇಕು. ಹೊನ್ನಾವರ ಗಲಭೆಯಂದು ಮಾರಕಾಸ್ತ್ರಗಳೊಂದಿಗೆ ಇರುವ ಅನ್ಯಕೋಮಿನ ಯುವಕರಿಗೆ ಬೆಂಬಲ ನೀಡಿದ ಸಿಪಿಐ ಅಮಾನತು ಮಾಡಬೇಕು. ತಲೆ ಮರೆಸಿಕೊಂಡಿರುವ ಜಿಹಾದಿಗಳನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಮಾಜಿ ಶಾಸಕ ಸುನೀಲ ಹೆಗಡೆ ಮಾತನಾಡಿ, ಕೋಮು ಗಲಭೆಗೆ ಕಾಂಗ್ರೆಸ್ ಸರ್ಕಾರ ನೇರ ಕಾರಣವಾಗಿದೆ. ಉಸ್ತುವಾರಿ ಸಚಿವರೇ ಉದ್ರೇಕಕಾರಿ ಭಾಷಣಗಳನ್ನು ಮಾಡುತ್ತಿದ್ದು, ಮೊದಲು ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ವಿ.ಎಸ್ ಪಾಟೀಲ್ ಇತರರಿದ್ದರು.
Leave a Comment